ಉಡುಪಿ: ಹಿಂದುತ್ವಕ್ಕಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,ಹಿಂದುತ್ವಕ್ಕಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕಾರ್ಯಕರ್ತರಿಗೆ ಶಕ್ತಿ ತುಂಬಲು ಈ ಸ್ಪರ್ಧೆ ಮಾಡುತ್ತಿದ್ದೇನೆ. ಈ ಸಂಬಂಧ 7-8 ಕ್ಷೇತ್ರಗಳನ್ನು ಅಧ್ಯಯನ ಮಾಡಿದ್ದು, ಇದರಲ್ಲಿ ಕಾರ್ಕಳ ಕೂಡ ಒಂದು. ಈ ತಿಂಗಳ ಅಂತ್ಯದಲ್ಲಿ ಕ್ಷೇತ್ರ ಬಗ್ಗೆ ಅಧಿಕೃತ ಘೋಷಣೆ ಮಾಡುತ್ತೇನೆ.
ಕಾರ್ಕಳದಲ್ಲಿ ಬೂತ್ ವೈಸ್ ಸಂಘಟನೆ ಮಾಡುತ್ತೇವೆ. ಭ್ರಷ್ಟಾಚಾರ ಡೋಂಗಿ ಹಿಂದುತ್ವದ ವಿರುದ್ಧ ಈ ಸ್ಪರ್ಧೆ ಎಂದರು. ಸುನೀಲ್ ಕುಮಾರ್ ಅವರನ್ನು ಜಿಲ್ಲಾ ಸಂಚಾಲಕನಿಂದ, ರಾಜ್ಯ ಸಂಚಾಲಕ ಮಾಡಿದ್ದು ನಾನು. ನನಗೂ ಅವರಿಗೂ ಮಾತನಾಡುವುದು ಏನೂ ಉಳಿದಿಲ್ಲ. ಬಿಜೆಪಿಯನ್ನೇ ತಿದ್ದುತ್ತೇನೆ ಕಾಂಗ್ರೆಸ್ ಸೇರಲ್ಲ ಎಂದರು.
ಕಾರ್ಕಳದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧ, ಗೋಹತ್ಯೆ ತಡೆಯಲು ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ. ಹಿಂದುತ್ವಕ್ಕಾಗಿ ಮನೆ ಮನೆಗೂ ತೆರಳಿ ಜೋಳಿಗೆ ಹಿಡಿದು ಮತಭಿಕ್ಷೆ ಬೇಡುತ್ತೇನೆ. ಆರ್ಥಿಕ ನೆರವು ಕೇಳುತ್ತೇನೆ ಎಂದರು.