ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. ಮಧು ಬಂಗಾರಪ್ಪ ಅವರ ಬೆಂಬಲಿಗರು ಕರೆ ಮಾಡಿ, ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬಂಧ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ದೂರು ನೀಡುತ್ತಿದ್ದೇನೆ ಎಂದರು.
ತಲೆಹರಟೆ ಹಾಗೂ ಮದುವೆಯಾಗಿರುವವರು ಸ್ವಾಮೀಜಿಯೇ ಅಲ್ಲ ಎಂದು ಮಧು ಬಂಗಾರಪ್ಪ ಅವರು ಪ್ರಣವಾನಂದ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, ನಾನು ಮದುವೆಯಾಗಿದ್ದೇನೆ. ನನ್ನ ಹೆಂಡತಿ ಕರೆದುಕೊಂಡು ನಿಮ್ಮ ಮನೆಗೆ ಬಂದು ಭಿಕ್ಷೆ ಬೇಡಿಲ್ಲ. ನಾನು ಶರಣ ಸಂಸ್ಕೃತಿಯಂತೆ ಮದುವೆಯಾಗಿದ್ದೇನೆ ಎಂದು ತಿರುಗೇಟು ನೀಡಿದರು.
ನನ್ನ ಡಿಎನ್ಎ ಬಗ್ಗೆ ನಿಮಗೆ ಏಕೆ ಬೇಕು? ನಾನು ಸ್ವಾಮೀಜಿ ಅಲ್ಲ ಅಂತ ಹೇಳಲು ಹಕ್ಕು ಕೊಟ್ಟವರು ಯಾರು? ಈಡಿಗ ಸಮುದಾಯಕ್ಕೆ ಅನ್ಯಾಯವಾದರೆ ಅದಕ್ಕೆ ನೀವೇ ಹೊಣೆ. ನಿಮ್ಮ ಹಿನ್ನೆಲೆ ಏನು ಅಂತ ನಿಮಗೆ ಗೊತ್ತಿದೆಯಾ? ಸಮುದಾಯಕ್ಕೆ ನಿಮ್ಮ ಸಾಧನೆ ಏನು? ಜೆಡಿಎಸ್ನಿಂದ ಕಾಂಗ್ರೆಸ್‌ಗೆ ಬಂದಿದ್ದೀರ. ಮುಂದೆ ಯಾವ ಪಕ್ಷಕ್ಕೆ ಹೋಗುತ್ತೀರಾ ಅಂತ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: INDIA ಒಕ್ಕೂಟದ ಮೊದಲ ರ‍್ಯಾಲಿ ರದ್ದು!
ಪ್ರಣವಾನಂದ ನಮ್ಮ ಸಮಾಜದವರೇ ಅಲ್ಲ: ಈ ಬಗ್ಗೆ ಮಾತನಾಡಿರುವ ಮಧು ಬಂಗಾರಪ್ಪ, ಪ್ರಣವಾನಂದ ಯಾಕೆ ಕಣ್ಣೀರು ಹಾಕಿದ್ದಾರೆ? ಅವರು ತಪ್ಪು ಮಾಡಿದ್ದಾರಾ? ಅವರು ಇಂತಹ ಬುರುಡೆಗಳನ್ನ ಬಿಟ್ಟುಕೊಂಡೇ ಬಂದಿದ್ದಾರೆ. ಪ್ರಣವಾನಂದ ನಮ್ಮ ಸಮಾಜದವರೇ ಅಲ್ಲ. ನನ್ನ ವಿರುದ್ಧ ಬೆಂಗಳೂರು ನಗರ ಪೊಲೀಸ್ ಕಮಿಷನರ್, ಸ್ಪೀಕರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಸೇರಿ ಯಾರಿಗೆ ಬೇಕಾದರೂ ದೂರು ಕೊಡಲಿ ಎಂದು ಸವಾಲು ಹಾಕಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.