ಬೆಂಗಳೂರು : ಊರಿಗೊಬ್ಳೇ ನಾನೇ ಪದ್ಮಾವತಿ ಅಂತಾ ಸಿದ್ದರಾಮಯ್ಯ ಓಡಾಡುತ್ತಿದ್ದರು. ಈಗ ಕೊನೆಗೆ ಹಳೆ ಗಂಡನ ಪಾದವೇ ಗತಿ ಅಂತಾ ವರುಣಾ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ನಾಯಕ ನಾನೇ, ಮುಂದಿನ ಮುಖ್ಯಮಂತ್ರಿ ನಾನೇ ಎನ್ನುವ ಸಿದ್ದರಾಮಯ್ಯ ಅವರಿಗೆ ಒಂದು ಕ್ಷೇತ್ರ ಹುಡುಕಿಕೊಳ್ಳಲು ಆಗಲಿಲ್ಲ. ಚುನಾವಣೆಗೆ ಹೆಸರು ಘೋಷಣೆಯಾಗುವವರೆಗೂ ಸುರಕ್ಷಿತ ಕ್ಷೇತ್ರಕ್ಕಾಗಿ ಸುತ್ತಾಟ ನಡೆಸುತ್ತಿದ್ದರು. ಕೊನೆಗೂ ಸಿದ್ದರಾಮಯ್ಯಗೆ ಅವರ ಪುತ್ರನ ಕ್ಷೇತ್ರ ವರುಣಾ ಫೈನಲ್ ಆಗಿದೆ ಎಂದರು.
ಮಗನ ನೆಲೆ ಕಳೆದು ವರುಣಾಗೆ ಬರುವ ಸ್ಥಿತಿ ಸಿದ್ದರಾಮಯ್ಯ ಅವರಿಗೆ ಬಂತು. ಸಿದ್ದರಾಮಯ್ಯ ಪುಕ್ಕಲತನದಿಂದ ವರುಣಾ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕಳೆದ ಬಾರಿ ಸಣ್ಣ ಅಂತರದಿಂದ ಸಿದ್ದರಾಮಯ್ಯ ಎಸ್ಕೇಪ್ ಆಗಿಬಿಟ್ಟಿದ್ದರು. ಈ ಬಾರಿ ಅವರು ಎಲ್ಲೇ ನಿಂತರೂ ಸೋಲುತ್ತಾರೆ ಎಂದು ಹೇಳಿದರು.
ತಮ್ಮ ಅಧಿಕಾರಾವಧಿಯಲ್ಲಿ ವಿವಿಧ ಭಾಗ್ಯ ಕೊಟ್ಟ ಸಿದ್ದರಾಮಯ್ಯರಿಗೆ ಕ್ಷೇತ್ರ ಭಾಗ್ಯ ಇಲ್ಲದಂತಾಗಿತ್ತು, ಸಿದ್ದರಾಮಯ್ಯರಿಗೆ ನೀಡಿರುವ ವಿವಿಧ ಭಾಗ್ಯಗಳಿಗೆ ಜನತೆ ಬೆಲೆ ನೀಡಿಲ್ಲ, ಅವರಿಗೆ ವಿಶ್ವಾಸವೂ ಇಲ್ಲ ಎಂದರು ಟೀಕಿಸಿದರು.