ಮೈಸೂರು: ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿ, ಈಗ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಹವಣಿಸುತ್ತಿದ್ದಾರೆ ಎಂದರು. ಕಳೆದ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ 5 ಸ್ಥಾನ ಗೆದ್ದಿದ್ದೇವೆ. ಈಗ 29 ಸ್ಥಾನಗಳಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ರಾಜ್ಯದ ನಾಲ್ಕು ಭಾಗಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದ್ದಾರೆ. ಪ್ರಧಾನಿ ಮೋದಿಯಂತಹ ನಾಯಕ ಸಿಕ್ಕಿರೋದು ನಿಜಕ್ಕೂ ಅದೃಷ್ಟ ಎಂದು ಅಭಿಪ್ರಾಯಪಟ್ಟರು.
‘ಹೌದು, ನಾನು ಕಾಂಗ್ರೆಸ್ ಕುರಿತು ಹೇಳಿಕೆ ನೀಡಿದ್ದೇನೆ. ಸಿದ್ದರಾಮಯ್ಯ ಕೆಎಫ್‌ಡಿ, ಪಿಎಫ್‌ಐ ಮೇಲಿನ ಕೇಸ್ ವಾಪಸ್ ತೆಗೆದುಕೊಂಡರು. ಅವರ ಮೇಲಿದ್ದ 175 ಕೇಸ್‌ಗಳನ್ನು ವಾಪಾಸ್ ತೆಗೆದುಕೊಂಡರು. ಇದರ ಪರಿಣಾಮವಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೊಲೆಯಾಗಿದ್ದನ್ನು ಎಲ್ಲರೂ ನೋಡಿದ್ದಾರೆ ಎಂದು ಪ್ರತಾಪ್ ಸಿಂಹ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.