ಬೆಂಗಳೂರು : ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬದಲ್ಲಿ ರಾಜಕೀಯ ಗಣ್ಯರು, ಚಿತ್ರರಂಗದವರು ಭಾಗಿಯಾಗಿದ್ದಾರೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಈ ವೇಳೆ ನಟಿ ರಮ್ಯಾರನ್ನು ಭೇಟಿ ಮಾಡಿದ್ದು, ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ‘ರಮ್ಯಾ ನನ್ನ ನೆಚ್ಚಿನ ನಟಿ’ ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ. ವಿರೋಧಿ ಪಕ್ಷದ ಮಾಜಿ ಸಂಸದೆಯನ್ನು ‘ನನ್ನ ನೆಚ್ಚಿನ ನಟಿ’ ಎಂದು ಕರೆಯುವುದರ ಹಿಂದೆ ಏನಾದರೂ ಉದ್ದೇಶವಿದೆಯಾ? ಎಂದು ಕೆಲವರು ಪ್ರಶ್ನೆ ಮಾಡಿದ್ದರೆ, ಇನ್ನೂ ಕೆಲವರು ‘ರಮ್ಯಾ ಅವರನ್ನು ಹಲವು ಬಾರಿ ಟೀಕಿಸಿದ್ದೀರಿ. ಈಗ ನೆಚ್ಚಿನ ನಟಿ ಎನ್ನುತ್ತಿರಲ್ಲ ಹೇಗೆ? ಎಂದೂ ಪ್ರಶ್ನೆ ಮಾಡಿದ್ದಾರೆ. ರಮ್ಯಾ ಏನಾದರೂ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ? ಎಂದು ಹಲವರು ಕೇಳಿದ್ದೂ ಇದೆ. ಎಲ್ಲದಕ್ಕೂ ಪ್ರತಾಪ್ ಉತ್ತರಿಸಿದ್ದಾರೆ.
ರಮ್ಯಾ ನನ್ನ ನೆಚ್ಚಿನ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರನ್ನು ನಟಿಯಾಗಿ ಮೆಚ್ಚಿಕೊಂಡಿದ್ದೇನೆ. ರಾಜಕೀಯವಾಗಿ ಈಗಲೂ ಟೀಕಿಸುವೆ. ರಾಜಕಾರಣ ಬೇರೆ, ಕಲೆ ಬೇರೆ ಎಂದು ಪ್ರತಾಪ್ ಉತ್ತರಿಸಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.