ಬೆಳಗಾವಿ: ನಮ್ಮ ಬೆಳಗಾವಿ ಗಂಡುಮೆಟ್ಟಿದ ನೆಲಕ್ಕೆ ಪ್ರಧಾನಮಂತ್ರಿ ಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದಾಜ್ಲೆ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ಮೋದಿ ಕಾರ್ಯಕ್ರಮ ಯಶಸ್ವಿ ಮಾಡಲು ಶಾಸಕರು, ಸಂಸದರು ಶ್ರಮಿಸುತ್ತಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮದ ಪೂರ್ವ ತಯಾರಿ ನಡೆಯುತ್ತಿದೆ ಎಂದರು.
ಫೆ. 27ರ ಬೆಳಗ್ಗೆ ಶಿವಮೊಗ್ಗ ಏರ್‌ಪೋರ್ಟ್ ದೇಶಕ್ಕೆ ಸಮರ್ಪಿಸಿ ಬೆಳಗಾವಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ರೋಡ್ ಶೋಗೆ ದೊಡ್ಡ ಸಂಖ್ಯೆಯಲ್ಲಿ ರೈತರು, ರೈತ ಮಹಿಳೆಯರು ಬರುತ್ತಾರೆ. ವೇದಿಕೆ ಮೇಲೆ ಯಾರು ಇರ್ತಾರೆ ಅನ್ನೋದು ಪಿಎಂ ಕಚೇರಿಯಿಂದ ಅಂತಿಮ ಆಗುತ್ತದೆ. ನನಗೆ ವಿಶ್ವಾಸವಿದೆ ಎಂದು ಹೇಳಿದರು.
ಪ್ರತಿ ಮೂರು ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 6 ಸಾವಿರ ರೂ. ಹಾಕುತ್ತಿದ್ದೇವೆ. ಈ ಬಾರಿ ಯಡಿಯೂರಪ್ಪನವರ ಜನ್ಮದಿನದಂದು ರೈತರ ಖಾತೆಗೆ ಹಣ ಹಾಕುತ್ತಿರುವುದು ಖುಷಿ ತಂದಿದೆ ಎಂದರು.
ಹಳೇ ಪಿಬಿ ರಸ್ತೆಯ ಬಿ.ಎಸ್.ಯಡಿಯೂರಪ್ಪ ಮಾರ್ಗದ ‘ಮಾಲಿನಿ ಸಿಟಿ’ ಪ್ರದೇಶದಲ್ಲಿ ವೇದಿಕೆ ಕಾರ‍್ಯಕ್ರಮ ನಡೆಯಲಿದೆ. ರಸ್ತೆಯುದ್ದಕ್ಕೂ ನೆರೆದಿದ್ದ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸ್ವಾಗತ ಕೋರಿದ ಮಾದರಿಯಲ್ಲೇ ಬೆಳಗಾವಿಯಲ್ಲೂ ಮೋದಿ ರೋಡ್ ಶೋ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.