ಮುಂಬೈ : ರಾಷ್ಟ್ರ ರಾಜಕಾರಣದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ಕಟ್ಟಿಹಾಕುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ಮುಂದಾಗಿರುವ ‘ಇಂಡಿಯಾ’ (ಇಂಡಿಯನ್ ನ್ಯಾಷನಲ್ ಡೆಮಾಕ್ರೆಟಿಕ್ ಇನ್‌ಕ್ಲುಸಿವ್ ಅಲೈಯನ್ಸ್) ಕೂಟದ ವಿಪಕ್ಷಗಳು ಪಾಟ್ನಾ, ಬೆಂಗಳೂರಿನ ಬಳಿಕ ಇದೀಗ ವಾಣಿಜ್ಯ ನಗರಿಯಲ್ಲಿ ತಮ್ಮ ಮೂರನೇ ಸಭೆ ನಡೆಸಲು ಮುಂದಾಗಿವೆ.
ಇದೇ ಆಗಸ್ಟ್ 31ರಿಂದ ಸೆಷ್ಟೆಂಬರ್ 1ರ ವರೆಗೆ ಎರಡು ದಿನ ನಡೆಯಲಿರುವ ಮೈತ್ರಿ ಪಕ್ಷಗಳ ಸಭೆಯಲ್ಲಿ ದೇಶದ 20ಕ್ಕೂ ಅಧಿಕ ಪಕ್ಷಗಳ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಈ ಸಭೆಯ ಸಿದ್ಧತೆಯಲ್ಲಿ ಸ್ಥಳೀಯ ಮಹಾರಾಷ್ಟ್ರದ ವಿಪಕ್ಷಗಳಾದ ಕಾಂಗ್ರೆಸ್, ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಹಾಗೂ ಶರದ್ ಪವಾರ್ ಮುಂದಾಳತ್ವದ ಎನ್‌ಸಿಪಿ ನಾಯಕರುಗಳು ಒಬ್ಬೊಬ್ಬರಂತೆ ಒಂದೊಂದು ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದಾರೆ.
ಇದನ್ನೂ ಓದಿ : ತಾಯಂದಿರ ಮುಖದಲ್ಲಿ ನೆಮ್ಮದಿಯ ನಗೆ ಕಾಣಲು ಉತ್ಸುಕನಾಗಿದ್ದೇನೆ: ಸಿಎಂ
ಶರದ್ ಪವಾರ್ ಈಗಾಗಲೇ ಸಭೆ ನಡೆಯುವ ಐಷಾರಾಮಿ ಹೋಟೆಲ್ ‘ಸಬರ್‌ಬನ್ ಮುಂಬೈ’ಗೆ ತೆರಳಿ ಅಂತಿಮ ಹಂತದ ಸಿದ್ದತೆಗಳನ್ನು ಪರಿಶೀಲಿಸಿದ್ದಾರೆ. ಸಾರಿಗೆ ವ್ಯವಸ್ಥೆಯಿಂದ ಹಿಡಿದು ಊಟ, ವಸತಿ ಹಾಗೂ ವಾರ್ ರೂಂ ವರೆಗಿನ ಜವಾಬ್ದಾರಿಗಳನ್ನು ‘ಮಹಾ ವಿಕಾಸ್ ಆಘಾಡಿ’ಯ ನಾಯಕರು ಹಂಚಿಕೊಂಡಿದ್ದಾರೆ.
ಯಾರಿಗೆ ಯಾವ್ಯಾವ ಜವಾಬ್ದಾರಿ..?
ಉದ್ದವ್ ಠಾಕ್ರೆ ಬಣದ ಶಿವಸೇನಾ ಸಂಸದ ಸಂಜಯ್ ರಾವುತ್, ಸಭೆಯ ಹಿನ್ನೆಲೆಯಲ್ಲಿ ನಿರ್ಮಣವಾಗಿರುವ ‘ವಾರ್ ರೂಂ’ ನಿರ್ವಹಿಸಲಿದ್ದಾರೆ. ಯಾವುದೇ ಸಂದರ್ಭದಲ್ಲೂ ಸಮಸ್ಯೆಗಳು ಎದುರಾಗದಂತೆ ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ.


ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸಭೆಗೆ ಆಗಮಿಸುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರ ಮಟ್ಟದ ಹಿರಿಯ ನಾಯಕರು ಹಾಗೂ ಅತಿಥಿಗಳ ‘ನೊಂದಣಿ’ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಲ್ಲದೆ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಮಿಲಿಂದ್ ದಿಯೋರಾ ಆಗಮಿಸುವ ಎಲ್ಲ ಗಣ್ಯರಿಗೆ ‘ವಸತಿ’ ವ್ಯವಸ್ಥೆಯ ಉಸ್ತುವಾರಿಯ ಜೊತೆಗೆ ಅತಿಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ವರಿಷ್ಠ ಶರದ್ ಪವಾರ್, ಸಭೆಗೆ ಆಗಮಿಸುವ ಗಣ್ಯರನ್ನು ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಕರೆತಂದು ವಾಪಸ್ ಬಿಡುವ ಕೆಲಸ ನಿರ್ವಹಿಸಲಿದ್ದಾರೆ.
ಆಗಸ್ಟ್ 31ರಂದು ಉದ್ದವ್ ಠಾಕ್ರೆ ಎಲ್ಲ ನಾಯಕರಿಗೆ ಖಾಸಗಿ ಔತಣಕೂಟವನ್ನು ಆಯೋಜಿಸಿದ್ದಾರೆ. ಸಸ್ಯಾಹಾರ, ಮಾಂಸಾಹಾರದ ಜೊತೆಗೆ ಮಹಾರಾಷ್ಟ್ರ ಶೈಲಿಯ ವಿಧವಿಧವಾದ ವಿಶೇಷ ತಿಂಡಿಗಳು ಭೋಜನಕೂಟದ ಪಟ್ಟಿಯಲ್ಲಿ ಸೇರಿವೆ. ಹೂರಣದ ಹೋಳಿಗೆ, ಆಲೂಗಡ್ಡೆ ವಡೆ ಹಾಗೂ ಶ್ರೀಖಂಡಗಳನ್ನು ಗಣ್ಯರು ಸವಿಯಲಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದ ಸೆಪ್ಟೆಂಬರ್ 1ರಂದು ಬೋಜನ ಕೂಟವನ್ನು ಆಯೋಜಿಸಲಿದೆ.


ವಿಮಾನ ನಿಲ್ದಾಣದ ಟರ್ಮಿನಲ್ T1, T2, ಟರ್ಮಿನಲ್ ಜೊತೆಗೆ 8ನೇ ಗೇಟ್‌ಬಳಿ ನಾಯಕರನ್ನು ಮುಂಬೈ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸಂಜಯ್ ನಿರುಪಮ್, ಮಾಜಿ ಕಾಂಗ್ರೆಸ್ ಶಾಸಕ ಮಧು ಚವಾಣ್, ಮಾಜಿ ಸಚಿವ ಅಸ್ಲಾಂ ಶೇಖ್ ಸೇರಿದಂತೆ ಇತರರು ರಾಷ್ಟ್ರ ನಾಯಕರನ್ನು ಸ್ವಾಗತಿಸಲಿದ್ದಾರೆ.
ಮಹಾರಾಷ್ಟ್ರದ ಮೂರು ಪಕ್ಷಗಳ ನಾಯಕರು ಇತ್ತಿಚೆಗಷ್ಟೇ ನಗರ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಿ ಭದ್ರತಾ ವ್ಯವಸ್ಥೆಯ ಕುರಿತು ಚರ್ಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಎನ್‌ಸಿಪಿಯ ಮುಖಂಡರು ಸರ್ಕಾರದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿದ್ದಾರೆ.
ಒಟ್ಟಿನಲ್ಲಿ ‘ಇಂಡಿಯಾ’ ಕೂಟದಿಂದ ನಡೆಯಲಿರುವ ಮೂರನೇ ಬೃಹತ್ ಸಭೆಗೆ ಮಹಾನಗರಿ ಸಜ್ಜಾಗಿದ್ದು, ಎನ್‌ಡಿಎ ಸರ್ಕಾರವನ್ನು ಹಣಿಯಲು ಯಾವ್ಯಾವ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿವೆ ಎಂಬ ಎಲ್ಲ ಪ್ರಶ್ನೆಗಳು ಮೂಡಿವೆ. ಇದೀಗ ರಾಷ್ಟ್ರದ ಚಿತ್ತ ಮಹಾರಾಷ್ಟ್ರದತ್ತ ನೆಟ್ಟಿದೆ ಎನ್‌ಡಿಎ ವಿರುದ್ಧ ಯಾವ ರೀತಿ ಇಂಡಿಯಾ ಪಟೆ ತೊಡೆತಟ್ಟಲಿದೆ ಎಂಬುವುದು ಸಭೆಯ ಬಳಿಕವೇ ತಿಳಿಯಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.