ಮೈಸೂರು: ದಸರಾಗೆ ವಿಧ್ಯುಕ್ತ ಚಾಲನೆ ನೀಡಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಕನ್ನಡದಲ್ಲೇ ಭಾಷಣ ಆರಂಭಿಸಿದರು. ದೇವಿ ಚಾಮುಂಡೇಶ್ವರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಹೇಳಿದ ಅವರು, ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಪ್ರತೀಕ, ತಾಯಿಯ ಆಶೀರ್ವಾದ ಎಲ್ಲರ ಮೇಲಿರಲಿ. ಅನ್ಯಾಯ, ಅಧರ್ಮ, ಅಹಂಕಾರ ಸೋಲಿಸಲು ದೇವಿ ಅವತಾರ ತೋರಿದ್ದಾರೆ. ಕರ್ನಾಟಕದ ಸಂಸ್ಕೃತಿ ವಿಶ್ವವ್ಯಾಪಿಯಾಗಿದ್ದು, ದಸರಾ ಪರಂಪರೆ ಇಂದಿಗೂ ಮುಂದುವರಿಯುತ್ತಿದೆ. ರಾಜ್ಯ ಸರ್ಕಾರದ ಪ್ರಯತ್ನದಿಂದ ಮತ್ತಷ್ಟು ವೈಭಯದತ್ತ ಸಾಗುತ್ತಿದೆ ಎಂದರು.
ಇನ್ನು, ತಾಯಿಯ ಆಶೀರ್ವಾದ ಎಲ್ಲರ ಮೇಲಿರಲಿ. ಭಕ್ತಿ, ಸ್ವಾತಂತ್ರ್ಯಕ್ಕೆ ಕರ್ನಾಟಕ ಹೆಸರುವಾಸಿಯಾಗಿದೆ. ದಸರಾಗೆ ಉದ್ಘಾಟನೆ ಬಂದಿದ್ದು ನನಗೆ ಸಂತಸ ತಂದಿದೆ. ಕಲಬುರಗಿ ಸೂಫಿ ಸಂತರ ನೆಲೆಬೀಡಾಗಿತ್ತು, ಆದಿ ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದ್ದಾರೆ, ಬಸವಣ್ಣ, ಸಂತರ ನಾಡು ಈ ಕರ್ನಾಟಕ. ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವರಂತಹ ವೀರ ವನಿತೆಯರಿದ್ದಾರೆ ಎಂದು ಕರ್ನಾಟಕದ ಪರಂಪರೆಯನ್ನ ಹಾಡಿಹೊಗಳಿದ್ರು.
ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಮ್ಮ ಭಾಷಣದಲ್ಲಿ ಎಲ್ಲರಿಗೂ ನಮಸ್ಕಾರ, ಎಲ್ಲರಿಗೂ ನಾಡಹಬ್ಬ ದಸರಾ ಮಹೋತ್ಸವದ ಶುಭಾಶಯಗಳು. ನವರಾತ್ರಿಯಿಂದ ಶುರುವಾಗಿ ವಿಜಯ ದಶಮಿಯಂದು ಮುಕ್ತಾಯವಾಗುತ್ತದೆ. ದೇಶದ ತುಂಬೆಲ್ಲ ಆಚರಣೆಯಲ್ಲಿದೆ. ದಸರಾದಲ್ಲಿ ಪ್ರತ್ಯಕ್ಷವಾಗಿ ಭಾಗಿವಹಿಸುತ್ತಿರುವುದಕ್ಕೆ ನಾನು ಭಾಗ್ಯಶಾಲಿ. ಜನಪ್ರತಿನಿಧಿಗಳು, ಅಧಿಕಾರಿಗಳು, ನಾಗರಿಕರು, ಸಮಿತಿಯವರಿಗೆ ಶುಭ ಕಾಮನೆಗಳು. ಧರ್ಮ, ಸಂಸ್ಕೃತಿ, ಪರಂಪರೆಯ ಆಚರಣೆಯನ್ನು ಯಶಸ್ವಿಯಾಗಿಸಬೇಕು. ವಿಶ್ವಶಾಂತಿಗೆ ಪ್ರಾರ್ಥನೆ ಸಲ್ಲಿಸೋಣ ಎಂದರು.