ನವದೆಹಲಿ: ದೇಶದಲ್ಲಿ ಸದ್ಯ ʼಇಂಡಿಯಾʼ ಹೆಸರನ್ನು ʼಭಾರತ್ʼ ಎಂದು ಮರುನಾಮಕರಣ ಮಾಡುವ ವಿಚಾರವಾಗಿ ಪರ ವಿರೋಧದ ಚರ್ಚೆಗಳು ಬಿರುಸಾಗಿ ನಡೆಯುತ್ತಿವೆ.
ಭಾರತ್ ಹೆಸರು ಮರುನಾಮಕರಣ ಮಾಡುವ ಕೇಂದ್ರದ ನಿರ್ಧಾರಕ್ಕೆ ವಿರೋಧ ಪಕ್ಷಗಳೂ ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು ಎಂದು ಪಟ್ಟು ಹಿಡಿದಿವೆ.
ಆದರೆ ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ʼಇಂಡಿಯಾʼ ಹಾಗೂ ʼಭಾರತ್ʼ ಹೆಸರಿನ ವಿಚಾರವಾಗಿ ಪ್ರತಿಪಕ್ಷಗಳ ಆರೋಪಕ್ಕೆ ಯಾರೂ ಪ್ರತಿಕ್ರಿಯೆ ನೀಡಬಾರದು ಸಚಿವ ಸಂಪುಟ ಸಭೆಯಲ್ಲಿ ನಾಯಕರಿಗೆ ಖಡಕ್ ಆಗಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಅಧಿಕೃತ ವ್ಯಕ್ತಿಗಳು ಮಾತ್ರವೇ ಪ್ರತಿಕ್ರಿಯೆ ನೀಡಬೇಕು ಎಂದೂ ಪ್ರಧಾನಿ ಮೋದಿ ಸೂಚಿಸಿದ್ದಾರಂತೆ.
ಕೇಂದ್ರ ಸರ್ಕಾರವು ಈ ಹಿಂದೆ ಹೆಸರು ನಾಮಕರಣ ವಿಚಾರ ಒಂದು ವದಂತಿ ಎಂದು ತಳ್ಳಿಹಾಕಿತ್ತು. ಆದರೆ, ನಿನ್ನೆ ರಾಷ್ಟ್ರಪತಿ ಅವರ ಶೃಂಗಸಭೆಗೆ ನೀಡಿದ್ದ ಆಮಂತ್ರಣದಲ್ಲಿ ʼಪ್ರೆಸಿಡೆಂಟ್ ಆಫ್ ಭಾರತ್ʼ ಎಂದು ಮುದ್ರಿಸಲಾಗಿತ್ತು. ಮೋದಿ ಅವರ ಪ್ರವಾಸದ ಲೆಟರ್‌ನಲ್ಲೂ ʼಪಿಎಂ ಆಫ್ ಭಾರತ್ʼ ಎಂದು ಮುದ್ರಿಸಲಾಗಿತ್ತು. ಈ ಎರಡೂ ಫೋಟೋಗಳು ನಿನ್ನೆಯಿಂದ ಹರಿದಾಡುತ್ತಿವೆ.
ಇದನ್ನೂ ಓದಿ: ಪಿಎಂ ಮೋದಿ ಪ್ರವಾಸದ ಲೆಟರ್‌ನಲ್ಲೂ ‘ಭಾರತ್’; ಅಧಿಕೃತವಾಯ್ತಾ ‘ಇಂಡಿಯಾ’ ಹೆಸರು ಬದಲಾವಣೆ?
ಕೇಂದ್ರ ಬಿಜೆಪಿ ಸರ್ಕಾರವು ಸದ್ದಿಲ್ಲದೆ, ಬೇರೆಯವರ ಅಭಿಪ್ರಾಯ ಪಡೆಯದೆ, ಇಂಡಿಯಾ ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡಿದೆ ಎಂದು ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದರೆ, ಭಾರತ್ ಹೆಸರನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ, ಭಾರತ್ ಮರುನಾಮಕರಣ ಅಧಿಕೃತವಾಗಿ ನಡೆದೇ ಹೋಗಿದೆ ಎಂದು ಹೇಳಲಾಗುತ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.