ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿಶ್ವ ನಾಯಕರು ಪ್ರಧಾನಿಗೆ ಶುಭಕೋರಿದ್ದಾರೆ. ಜೊತೆಗೆ ಬಿಜೆಪಿ ನಾಯಕರು ಸಹ ಪ್ರಧಾನಿ ಮೋದಿ ಅವರ ಈ ಹಬ್ಬವನ್ನು ವಿಶೇಷವಾಗಿಸಲು ಹಲವು ಕಾರ್ಯಕ್ರಮಗಳ ಹಮ್ಮಿಕೊಂಡಿದ್ದಾರೆ.
ಇಂದು ವಿಶೇಷವಾಗಿ ಆಯುಷ್ಮಾನ್ ಭವ ಅಭಿಯಾನ ಆರಂಭಿಸಲಾಗಿದ್ದು, ಆರೋಗ್ಯ ಕಾರ್ಡ್ ವಿತರಣೆಗೆ ಮುಂದಾಗಲಾಗಿದೆ. ಜೊತೆಗೆ ಮೋದಿ ಹುಟ್ಟುಹಬ್ಬದ ದಿನ ಹಲವು ಕಾರ್ಯಕ್ರಮಗಳು, ಯೋಜನೆಗಳು ಚಾಲ್ತಿಗೆ ಬಂದಿವೆ. ಲೋಕಸಭೆ ಚುನಾವಣೆಗೆ ಕೆಲ ತಿಂಗಳುಗಳು ಬಾಕಿ ಉಳಿದಿದ್ದು, ಪ್ರಧಾನಿ ಮೋದಿ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಕಾಂಗ್ರೆಸ್ ‘ವಿಜಯಭೇರಿ’ ಸಮಾವೇಶ : 6 ಗ್ಯಾರಂಟಿ ಘೋಷಣೆ ಸಾಧ್ಯತೆ
ಬಿಜೆಪಿಯ ಅಲಿಖಿತ ನಿಯಮದಂತೆ 75 ವರ್ಷ ದಾಟಿದ ನಾಯಕರಿಗೆ ಅತ್ಯುನ್ನತ ಹುದ್ದೆ ಸಿಗುವುದಿಲ್ಲ. ಸದ್ಯ ಪ್ರಧಾನಿಗೆ 73 ವರ್ಷವಾಗಿದ್ದು, ಇನ್ನೆರಡು ವರ್ಷ ಮಾತ್ರ ಅವರು ಅಧಿಕಾರದಲ್ಲಿ ಉಳಿಯಲಿದ್ದಾರಾ ಎಂಬ ಅನುಮಾನ ಮೂಡಿದೆ. ವಯಸ್ಸಿನ ಕಾರಣವೊಡ್ಡಿಯೇ ಬಿ.ಎಸ್ ಯಡಿಯೂರಪ್ಪ ಅವರನ್ನು ಸಹ ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಹಾಗಾದ್ರೆ ಪ್ರಧಾನಿ ಮೋದಿ ಸಹ 75ರ ನಂತರ ಅಧಿಕಾರ ತ್ಯಾಗ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಮೋದಿಯೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ. ಚುನಾವಣೆಯಲ್ಲಿ ಗೆದ್ದು ಮೋದಿಯೇ ಪ್ರಧಾನಿಯಾದರೆ ಎರಡು ವರ್ಷದ ಬಳಿಕ ಅಧಿಕಾರದಿಂದ ಕೆಳಗಿಳಿಯುತ್ತಾರಾ ಎಂಬ ಕುತೂಹಲ ಮೂಡಿಸಿದೆ. ಬಿಜೆಪಿ ಹೈಕಮಾಂಡ್ ಈಗಾಗಲೇ ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಬದಲಾಯಿಸಿದೆ. ಜೊತೆಗೆ ಹಿರಿಯ ನಾಯಕರಿಗೆ ಮತ್ತೆ ಟಿಕೆಟ್ ನೀಡದೆ ಹೊಸ ಮುಖಗಳಿಗೆ ಮಣೆ ಹಾಕುವ ಕಾರ್ಯ ಮಾಡುತ್ತಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಜನ್ಮದಿನ : ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಗಣ್ಯರ ಶುಭಾಶಯಗಳ ಮಹಾಪೂರ
ರಾಜ್ಯ ವಿಧಾನ ಸಭೆ ಚುನಾವಣೆಯಲ್ಲೂ ಹಿರಿಯರಿಗೆ ಕೋಕ್ ನೀಡಿ ಹೊಸಬರಿಗೆ ಮಣೆ ಹಾಕಿತ್ತು. ಆದರೆ ರಾಜ್ಯದ ಫಲಿತಾಂಶ ಅವರ ನಿರೀಕ್ಷೆಯಂತೆ ಬಾರದಿರುವುದು ಹೊಸ ಸವಾಲಿಗೆ ದಾರಿಯಾಗಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿಯ ಫಾರ್ಮುಲ ಮೂಲಕ ಟಿಕೆಟ್ ಹಂಚಿಕೆಗೆ ಬಿಜೆಪಿ ಸಿದ್ಧತೆ ನಡೆಸಿದೆ.
ಇತ್ತ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕರು ಜನತೆ ಎದುರು ಮತಯಾಚನೆಗಿಳಿದಿದ್ದಾರೆ. ಆದರೆ 75 ವರ್ಷ ತುಂಬಿದ ಬಳಿಕ ಮೋದಿಯವರನ್ನೂ ಅಧಿಕಾರದಿಂದ ಕೆಳಗಿಳಿಸುತ್ತಾರೆಯೇ? ಎಂಬ ಬಹುದೊಡ್ಡ ಪ್ರಶ್ನೆ ದೇಶದ ಮುಂದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.