ಬೆಂಗಳೂರು: ಚಂದ್ರಯಾನ-3 ಯೋಜನೆ ಯಶಸ್ವಿಯಾಗಿರುವ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳನ್ನು ಖುದ್ದು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳ್ಳಂಬೆಳಿಗ್ಗೆಯೇ ವಿದೇಶದಿಂದ ನೇರವಾಗಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬರಲಿದ್ದಾರೆ.
ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಅಲ್ಲಿಂದ ನೇರವಾಗಿ ರಸ್ತೆ ಮಾರ್ಗದ ಮೂಲಕ ಪೀಣ್ಯದಲ್ಲಿರುವ ಇಸ್ರೋ ಸೆಂಟರ್‌ಗೆ ತೆರಳಲಿದ್ದಾರೆ. ಅಲ್ಲಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹಾಗೂ ಇಡೀ ಚಂದ್ರಯಾನದ ತಂಡವನ್ನು ಭೇಟಿಯಾಗಿ ಅಭಿನಂದನೆ ತಿಳಿಸಲಿದ್ದಾರೆ. ಬಳಿಕ ಮತ್ತೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಮೋದಿ ಅವರ ಬೆಂಗಳೂರು ಭೇಟಿಯ ದಿನಚರಿ ಹೀಗಿದೆ..
ಪ್ರಧಾನಿ ನರೇಂದ್ರ ಮೋದಿ ರೂಟ್ ಮ್ಯಾಪ್:
* ಬೆಳಿಗ್ಗೆ 6:00– HAL ಏರ್‌ಪೋರ್ಟ್‌ಗೆ ಮೋದಿ ಆಗಮನ.
* ಬೆಳಿಗ್ಗೆ 6:30-HALನಿಂದ ಪೀಣ್ಯ ಇಸ್ರೋ ಕಚೇರಿಯತ್ತ ಮೋದಿ ಪಯಣ. (24 ಕಿ.ಮೀ ರಸ್ತೆ ಮಾರ್ಗ)
ಮೋದಿ ಸಾಗುವ ಮಾರ್ಗ: HAL ಏರ್‌ಪೋರ್ಟ್‌ನಿಂದ ಓಲ್ಡ್ ಮದ್ರಾಸ್ ರೋಡ್ ಮಾರ್ಗವಾಗಿ ಟ್ರಿನಿಟಿ ಸರ್ಕಲ್ ತಲುಪಲಿದ್ದಾರೆ. ಅಲ್ಲಿಂದ ಎಂ.ಜಿ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್, ಬಳ್ಳಾರಿ ರಸ್ತೆ, ಕಾವೇರಿ ಜಂಕ್ಷನ್, ಸ್ಯಾಂಕಿ ಟ್ಯಾಂಕ್ ರಸ್ತೆಯ ಮಾರ್ಗವಾಗಿ ಯಶವಂತಪುರ ತಲುಪಲಿದ್ದಾರೆ. ಅಲ್ಲಿಂದ ತುಮಕೂರು ರಸ್ತೆಯ ಮಾರ್ಗವಾಗಿ ಗೊರಗೊಂಟೆ ಪಾಳ್ಯ, ಜಾಲಹಳ್ಳಿ ಕ್ರಾಸ್ ಮಾರ್ಗವಾಗಿ ಪೀಣ್ಯ ಇಸ್ರೋ ಕೇಂದ್ರಕ್ಕೆ ತಲುಪಲಿದ್ದಾರೆ)
* ಬೆಳಿಗ್ಗೆ 7:00-ಇಸ್ರೋ ಕಚೇರಿ ತಲುಪಲಿರುವ ಮೋದಿ
* ಬೆಳಿಗ್ಗೆ 8:00-ಪೀಣ್ಯದಿಂದ HAL ಏರ್ಪೋರ್ಟ್‌ಗೆ ವಾಪಸ್
* ಬೆಳಿಗ್ಗೆ 8:30-HAL ವಿಮಾನ ನಿಲ್ದಾಣದಿಂದ ದೆಹಲಿಗೆ ಮೋದಿ ಪ್ರಯಾಣ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.