ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-3 ಯಶಸ್ವಿಯಾಗಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ವಿದೇಶದಿಂದ ನೇರವಾಗಿ ಬೆಂಗಳೂರಿಗೆ ಬಂದಿಳಿದರು.
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಭಾರತದ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಅಂಬೆಗಾಲಿಟ್ಟ ಅಭೂತಪೂರ್ವ ಕ್ಷಣವನ್ನು ವಿದೇಶದಲ್ಲೇ ಕಣ್ತುಂಬಿಕೊಂಡಿದ್ದರು. ಅಲ್ಲದೆ ಮೋದಿ ಅವರು ದೂರವಾಣಿ ಕರೆಯ ಮೂಲಕ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರನ್ನು ಅಭಿನಂದಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ನಮ್ಮ ಅಸಾಧಾರಣ ಇಸ್ರೋ ವಿಜ್ಞಾನಿಗಳ ಜೊತೆ ಸಂವಹನ ನಡೆಸಲು ಎದುರುನೋಡುತ್ತಿದ್ದೇನೆ. ಚಂದ್ರಯಾನ-3 ಯಶಸ್ಸಿನಿಂದ ಭಾರತಕ್ಕೆ ಹೆಮ್ಮೆ ತಂದ ವಿಜ್ಞಾನಿಗಳು! ಅವರ ಸಮರ್ಪಣೆ ಮತ್ತು ಉತ್ಸಾಹವು ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ರಾಷ್ಟ್ರದ ಸಾಧನೆಗಳ ಹಿಂದಿನ ಪ್ರೇರಕ ಶಕ್ತಿಗಳಾಗಿವೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : ನಿಮಗೆ ಚಿರತೆ ಬೇಕಿದ್ರೆ ನಮ್ಮತ್ರ ಬನ್ನಿ : ಮೋದಿಗೆ ಆಹ್ವಾನ ಕೊಟ್ಟ ದ. ಆಫ್ರಿಕಾ ಅಧ್ಯಕ್ಷ
ಚಂದ್ರಯಾನವನ್ನು ಬೆಂಗಳೂರಿನ ಇಸ್ರೋ ಕೇಂದ್ರದಿಂದಲೇ ನಿರ್ವಹಣೆ ಮಾಡಿರುವ ಕಾರಣ, ಸದ್ಯ ಚಂದ್ರಯಾನಕ್ಕೆ ಶ್ರಮಿಸಿದ ಇಡೀ ತಂಡ ಬೆಂಗಳೂರಿನಲ್ಲೇ ಇದೆ. ರೋವರ್‌ನ ಚಲನವಲನಗಳನ್ನು ಕೂಡ ಬೆಂಗಳೂರಿನಿಂದಲೇ ಕಂಟ್ರೋಲ್ ಮಾಡಲಾಗುತ್ತಿದೆ.
ಹಾಗಾಗಿ, ಇಸ್ರೋ ವಿಜ್ಞಾನಿಗಳ ತಂಡವನ್ನು ಖುದ್ದು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾ ಹಾಗೂ ಗ್ರೀಸ್ ಪ್ರವಾಸ ಮುಗಿಸಿ, ನೇರವಾಗಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬೆಳ್ಳಂಬೆಳಿಗ್ಗೆ ಆಗಮಿಸಿದ್ದಾರೆ.
ವಿಶೇಷ ವಿಮಾನದ ಮೂಲಕ ಹೆಚ್‌ಎಎಲ್ ಏರ್‌ಪೋರ್ಟ್‌ಗೆ ಆಗಮಿಸಿದ ಮೋದಿ , ಅಲ್ಲಿಂದ ನೇರವಾಗಿ ರಸ್ತೆ ಮಾರ್ಗದ ಮೂಲಕ ಪೀಣ್ಯದಲ್ಲಿರುವ ಇಸ್ರೋ ಕೇಂದ್ರದತ್ತ ಹೊರಟರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.