ಬೆಂಗಳೂರು : ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ಕಕ್ಷೆಯಲ್ಲಿ ಇಳಿದ ಸ್ಥಳವನ್ನು ಶಿವಶಕ್ತಿ ಕೇಂದ್ರವೆಂದು ಪ್ರಧಾನಿ ನರೇಂದ್ರ ಮೋದಿ ನಾಮಕರಣ ಮಾಡಿದ್ದಾರೆ.
ಇಸ್ರೋ ಕಚೇರಿಯಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿವಶಕ್ತಿ ಎಂಬುವುದು ಅಭಿವೃದ್ದಿಯ ಸಂಕೇತವಾಗಿದೆ ಹೀಗಾಗಿ ಅದಕ್ಕೆ ಶಿವಶಕ್ತಿ ಎಂದು ಹೆಸರಿಸುತ್ತೇನೆ ಎಂದರು.
ಭಾರತದ ಮನ ಮನಗಳಲ್ಲೂ ತ್ರಿವರ್ಣ ಧ್ವಜವು ರಾರಾಜಿಸುತ್ತಿದೆ. ಚಂದ್ರಯಾನ2ರ ಪತನದ ಸ್ಥಳವನ್ನು ತಿರಂಗಾ ಕೇಂದ್ರವೆಂದು ಮೋದಿ ನಾಮಕರಣ ಮಾಡಿದರು. ಈ ಸ್ಥಳದಿಂದಲೇ ಇಷ್ಟೊಂದು ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಚಂದ್ರಯಾನ-2ರ ವಿಫಲತೆಯನ್ನು ನೆನಪಿಸಿಕೊಂಡರು.
ಈಗ ಅದೇ ತಿರಂಗಾ ಚಂದ್ರನ ಮೇಲೆ ಹಾರಾಡುತ್ತಿದೆ. ಇದಕ್ಕೆ ಕಾರಣರಾದ ಇಸ್ರೋ ವಿಜ್ಞಾನಿಗಳ ಸಾಧನೆ ದೇಶದ ಪ್ರತಿಯೊಬ್ಬರಿಗೂ ಅರ್ಥವಾಗಬೇಕಿದೆ ಎಂದ ಅವರು ವಿಕ್ರಮ್ ಲ್ಯಾಂಡರ್ ಚಂದ್ರನ ಕಕ್ಷೆಯನ್ನು ತಲುಪಿರುವ ದಿನವಾದ ಆಗಸ್ಟ್ 23ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಿಸಲಾಗುವುದು ಎಂದು ಘೋಷಿಸಿದರು.