ಬೆಂಗಳೂರು: ಇಂದು ಚಂದ್ರಯಾನ-3 ಯಶಸ್ವಿಯಾಗಿ ಚಂದಿರನ ಅಂಗಳದಲ್ಲಿ ಕಾಲಿಟ್ಟಿದ್ದು, ಇಡೀ ವಿಶ್ವ ಭಾರತದತ್ತ ಹುಬ್ಬೇರಿಸಿ ನೋಡುವಂತೆ ಮಾಡಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಿಂದಲೇ ದೂರವಾಣಿ ಮೂಲಕ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರನ್ನು ಅಭಿನಂದಿಸಿದರು.
ಇದೀಗ ಪ್ರಧಾನಿ ಮೋದಿ ಖುದ್ದು ಇಸ್ರೋ ಸಾಧನೆಯನ್ನು ಶ್ಲಾಘಿಸಲು ಉದ್ಯಾನನಗರಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಆಗಸ್ಟ್ 26ರ ಶನಿವಾರ ಸಂಜೆ ಮೋದಿ ಬೆಂಗಳೂರಿಗೆ ಬರಲಿದ್ದು, ಸಂಜೆ 6.30ಕ್ಕೆ ಇಸ್ರೋ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ಆಗಮಿಸಲಿರುವ ಪ್ರಧಾನಿ ಮೋದಿ, ಬಳಿಕ ಚಂದ್ರಯಾನ ತಂಡವನ್ನು ಭೇಟಿ ಮಾಡಿ ಅಭಿನಂದನೆ ತಿಳಿಸಲಿದ್ದಾರೆ. ಚಂದ್ರಯಾನದ ಹೊಣೆ ಹೊತ್ತಿರುವ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥನ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿ, ವೈಯಕ್ತಿಕವಾಗಿ ಅಭಿನಂದಿಸಲಿದ್ದಾರೆ. ಬಳಿಕ ರಾತ್ರಿ 8.30ಕ್ಕೆ ದೆಹಲಿಗೆ ವಾಪಸ್ ಆಗಲಿದ್ದಾರೆ.
ಇನ್ನು ಶ್ರೀಹರಿಕೋಟದ ಉಡ್ಡಯನ ಕೇಂದ್ರದಿಂದ ಚಂದ್ರಯಾನ ನೌಕೆ ನಭಕ್ಕೆ ಹಾರಿತ್ತು. ಆದರೆ, ಇದರ ಇಂದಿನ ಪೂರ್ಣ ಕಾರ್ಯಾಚರಣೆಯನ್ನು ಬೆಂಗಳೂರಿನಲ್ಲಿರುವ ಇಸ್ರೋ ವಿಜ್ಞಾನ ಕೇಂದ್ರದಿಂದಲೇ ನಿರ್ವಹಿಸಿರುವುದು ಮತ್ತೊಂದು ಹೆಮ್ಮೆಯ ಸಂಗತಿ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.