ಬೆಂಗಳೂರು: ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು, ಗೃಹ ಸಚಿವರು ಪದೇ ಪದೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಈ ಸರ್ಕಾರ 40% ಸರ್ಕಾರ, ಹೀಗಾಗಿ ಬಿಜೆಪಿ ಸಮಾವೇಶಗಳಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೆಸರನ್ನು ಹೇಳುತ್ತಿಲ್ಲ ಹೆಸರು ಹೇಳಿದ್ರೆ ಮತ ಹಾಕಲ್ಲ ಅಂತಾ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯದ ಮೇಲೆ ಪ್ರೀತಿ ಹೆಚ್ಚಾಗಿದ್ದು , ಪ್ರವಾಹ ನೆರೆ ಬಂದಾಗ ಬಾರದವರು ಎಲೆಕ್ಷನ್ ಸಮಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಅಮಿತ್ ಶಾ ಅವರು ಮೋದಿ ಅವರ ಮುಖ ನೋಡಿ ಮತ ನೀಡಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದಿದ್ದಾರೆ.
ಇಲ್ಲಿ ಸದನದಲ್ಲಿ ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಇಲ್ಲಿ ರಾಜ್ಯ ನಾಯಕರು ಜನರ ವಿಶ್ವಾಸ ಇಟ್ಟುಕೊಂಡಿಲ್ಲ. ಈ ಸರ್ಕಾರ 40% ಸರ್ಕಾರ, ಪೇಸಿಎಂ ಎಂದು ದೇಶದಲ್ಲಿ ಕುಖ್ಯಾತಿ ಪಡೆದಿದ್ದಾರೆ. ಹೀಗಾಗಿ ಮೋದಿ ಮುಖ ನೋಡಿ ಮತ ನೀಡಿ ಎಂದು ಹೇಳುತ್ತಿದ್ದಾರೆ.
ಸರ್ಕಾರ ನಮಗೆ ದಿನಕ್ಕೊಂದು ಹಗರಣ ನೀಡುತ್ತಿದ್ದಾರೆ. ನಾವು ದಾಖಲೆ ಸಮೇತ ಮಾತನಾಡಿದರೆ ನಮ್ಮ ವಿರುದ್ಧ ಸಿಐಡಿ ನೋಟೀಸ್ ನೀಡುತ್ತಾರೆ. ಇವರು ಪಠ್ಯಪುಸ್ತಕ, ಶಾಲಾ ಬ್ಯಾಗ್, ಶೂ ಯಾವುದನ್ನು ಬಿಡುತ್ತಿಲ್ಲ. ಎಲ್ಲದರಲ್ಲೂ ಹಗರಣ ಎಂದು ಆರೋಪಿಸಿದರು.