ಬೆಂಗಳೂರು: ಬಿಜೆಪಿಯಂದ್ರೆ ಬ್ರೋಕರ್ ಜನತಾ ಪಕ್ಷ. ಬಿಜೆಪಿಯವರು ವಿಧಾನಸೌಧವನ್ನು ಜಗತ್ತಿನ ದೊಡ್ಡ ಶಾಪಿಂಗ್ ಮಾಲ್ ಮಾಡಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ರಾಜ್ಯ ಅನ್ನೋ ಬಿರುದು ಸಿಕ್ಕಿದೆ. ಈ ಶಾಪಿಂಗ್ ಮಾಲ್‍ನಲ್ಲಿ ವರ್ಗಾವಣೆ, ಪೋಸ್ಟಿಂಗ್, ಕಾಮಗಾರಿ, ಉದ್ಯೋಗ ಖರೀದಿ ಮಾಡಬಹುದು ಎಂದು ಹೇಳಿದ್ದಾರೆ. ರಾಜ್ಯದ ಉತ್ತಮ ಸೇಲ್ಸ್‌ಮೆನ್‌ಗಳು ಅಲ್ಲಿದ್ದಾರೆ. ಅಧಿಕಾರಿಗಳು, ಮಂತ್ರಿಗಳು, ಅನೇಕ ಶಾಸಕರೇ ಅದರ ಸೇಲ್ಸಮೆನ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬೊಮ್ಮಾಯಿ ಆಡಳಿತದಲ್ಲಿ ರೌಡಿ ಮೋರ್ಚಾ ಓಪನ್ ಮಾಡಿದ್ದಾರೆ. ಸ್ಯಾಂಟ್ರೋ ರವಿಗೆ ಹೋಮ್ ಮಿನಿಸ್ಟರ್‌ಗಿಂತ ಹೆಚ್ಚಿನ ಮಾಹಿತಿ ಇದೆಯಂತೆ. ಅಧಿಕಾರಿಗಳ ವರ್ಗಾವಣೆ ಮಾಡಿಸೋದೆ ಆತನ ಸೋಶಿಯಲ್ ವರ್ಕ್ ಅಂತೆ. ಆತನ ಆಡಿಯೋ ಕೇಳಿದ್ರೆ ಆತ ಸುಳ್ಳು ಹೇಳುತ್ತಿಲ್ಲ ಅಂತ ಅನ್ಸುತ್ತೆ. ಯಾರನ್ನು ಒದ್ದು ಒಳಗೆ ಹಾಕಬೇಕಿತ್ತೋ ಅಂತವರ ಕಾಲಿಗೆ ಅಧಿಕಾರಿಗಳು ಬೀಳುವಂತಾಗಿದೆ. ಜೈಲಲ್ಲಿರಬೇಕಾದವರು ಕುಮಾರಕೃಪಾದಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ.