ಬೆಂಗಳೂರು:‘ಭಾರತ್ ಜೋಡೋ ಭವನ’ ಉದ್ಘಾಟನೆಗಾಗಿ ಕಾಂಗ್ರೆಸ್ ವರಿಷ್ಠೆ ಪ್ರಿಯಾಂಕಾ ಗಾಂಧಿ ಜ.6ರಂದು ನಗರಕ್ಕೆ ಆಗಮಿಸಲಿದ್ದಾರೆ.
ಜ.9ರಂದು ಬೆಳಗ್ಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪ್ರಿಯಾಂಕಾ ಗಾಂಧಿ ಸುಮಾರು ಆರು ವರ್ಷಗಳ ದೀರ್ಘ ಅವಧಿಯಲ್ಲಿ 20 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಭಾರತ ಜೋಡೋ ಭವನವನ್ನು ಉದ್ಘಾಟಿಸಲಿದ್ದಾರೆ. ಈ ಕಟ್ಟಡ ಉದ್ಘಾಟನಾ ಸಮಾರಂಭದ ನಂತರ ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ‘ನಾ ನಾಯಕಿ’ ಸಮಾವೇಶಗಳ ಸಮಾರೋಪ ಸಮಾರಂಭದಲ್ಲಿ ಅವರು ಪಾಲ್ಗೊಳ್ಳುವರು ಎಂದು ಮೂಲಗಳು ತಿಳಿಸಿವೆ.
ಈ ಬೃಹತ್ ಕಟ್ಟಡವು ಮೂರು ಅಂತಸ್ತುಗಳನ್ನು ಹೊಂದಿದ್ದು, ನೆಲ ಹಾಗೂ ಮೊದಲ ಮಹಡಿ ಒಗ್ಗೂಡಿ ಬೃಹತ್ ಆಡಿಟೋರಿಯಂ ಹೊಂದಿದೆ. ಎರಡನೇ ಮಹಡಿಯಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಕಚೇರಿಗಳು ಇರಲಿವೆ. ಇದಲ್ಲದೆ, ಎರಡು ತಳ ಮಹಡಿಗಳನ್ನು ವಾಹನ ನಿಲುಗಡೆಗಾಗಿ ನಿರ್ಮಿಸಲಾಗಿದೆ.
ಮಹಿಳಾ ಕಾಂಗ್ರೆಸ್ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ನಾ ನಾಯಕಿ’ ಸಮಾವೇಶವನ್ನು ಆಯೋಜಿಸಿತ್ತು. ಈ ಸಮಾವೇಶಗಳ ಸಮಾರೋಪ ಸಮಾರಂಭ ಜ. 9ರಂದು ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಿಯಾಂಕಾ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಪಾಲ್ಗೊಳ್ಳಲಿದ್ದಾರೆ.