Monday, December 11, 2023
spot_img
- Advertisement -spot_img

ಕಾವೇರಿ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿ ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರರ ಆಕ್ರೋಶ!

ಮಂಡ್ಯ : ರಾಜ್ಯದ ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿಂದು ಕನ್ನಡಪರ ಕಾರ್ಯಕರ್ತರು ಕಾವೇರಿ ಪ್ರತಿಮೆಗೆ ಕ್ಷೀರಾಭಿಷೇಕ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ನಗರದ ಡಿಸಿ ಪಾರ್ಕ್‌ನಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ಹಾಲು, ಮೊಸರು, ಎಳನೀರು, ಗಂಧದ ಅಭಿಷೇಕ ಮಾಡುವ ಮೂಲಕ ಹೂವಿನಿಂದ ಅಲಂಕಾರ ಮಾಡಿದ್ದಾರೆ. ಬಳಿಕ ವಿಶೇಷ ಪೂಜೆ ಸಲ್ಲಿಸಿ, ಸುಪ್ರೀಂಕೋರ್ಟ್‌ ತೀರ್ಪು ನಮ್ಮ ಪರವಾಗಿ ಬರಲೆಂದು ಪ್ರಾರ್ಥಿಸಿದ್ದಾರೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸರ್ಕಾರದ ವಿರುದ್ಧ ಘೋ‍ಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ, ಖಾಲಿ ಕೊಡಗಳೊಂದಿಗೆ ಹೋರಾಟ ನಡೆಸುತ್ತಿರುವ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ಕಾವೇರಿ ಪ್ರತಿಮೆಗೆ ಕ್ಷೀರಾಭಿಷೇಕ ಮಾಡುತ್ತಿರುವ ಕನ್ನಡಪರ ಕಾರ್ಯಕರ್ತರು.

ಇದನ್ನೂ ಓದಿ : ಕಾವೇರಿ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಶಿಫ್ಟ್

ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ಕಾವೇರಿ ವಿವಾದದ ವಿಚಾರಣೆಯಲ್ಲಿ, ತೀರ್ಪು ನಮ್ಮ ಪರವಾಗಲಿ ಎಂದು ಹೋರಾಟಗಾರರು ಘೋಷಣೆ ಕೂಗಿದ್ದಾರೆ.

ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲು ಮುಂದಾದ ರೈತಸಂಘ..

ಮಂಡ್ಯದಲ್ಲಿ ಮುಂದುವರಿದಿರುವ ಅನ್ನದಾತರ ಪ್ರತಿಭಟನೆಯಲ್ಲಿ ಇಂದು ರಾಜ್ಯ ರೈತ ಸಂಘದಿಂದ ಕೆ.ಆರ್.ಎಸ್ ಡ್ಯಾಂ ಮುತ್ತಿಗೆಗೆ ನೂರಾರು ಮಹಿಳಾ ಹೋರಾಟಗಾರರು ಮುಂದಾಗಿದ್ದಾರೆ. ಕೆಆರ್‌ಎಸ್‌ ಪೊಲೀಸ್ ಠಾಣೆ ಬಳಿ ಜಮಾಯಿಸಿರುವ ರೈತರು ಖಾಲಿ ಬಿಂದಿಗೆ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಮಟೆ ವಾದ್ಯಗಳೊಂದಿಗೆ ಶಂಖ ಜಾಗಟೆ ಹಿಡಿದು ಬಾಂಕಿ ಬಾರಿಸುತ್ತ ಪ್ರತಿಭಟನೆಯಲ್ಲಿ ದಾಸಪ್ಪಗಳು ಹೋರಾಟಕ್ಕೆ ಸಾಥ್ ನೀಡಿದ್ದಾರೆ.

ನಾವು ಸುಪ್ರೀಂನಲ್ಲಿ ಅರ್ಜಿ ಸಲ್ಲಿಸುತ್ತೇವೆ..

ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸರ್ಕಾರ ಮಾಡಿರುವ ಕೇಸ್ ಫೈಲ್‌ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇವೆ. ಮಾಜಿ ಅಡ್ವೊಕೇಟ್ ಜನರಲ್ ರವಿರ್ಮ ಕುಮಾರ್ ಅವರಿಂದ ನಾವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ. ಬುಧವಾರ ವಿಚಾರಣೆಗೆ ಬರುವ ಹಾಗೆ ನಾವು ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಸುತ್ತೇವೆ. ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ನಾವು ಅದರಲ್ಲಿ ಉಲ್ಲೇಖ ಮಾಡುತ್ತೇವೆ. ಪ್ರಾಧಿಕಾರ ಸ್ಥಳಕ್ಕೆ ಬಂದು ವಸ್ತುಸ್ಥಿತಿ ತಿಳಿಯಬೇಕು. ಇರುವ ನೀರಿನ ಲೆಕ್ಕಾಚಾರವನ್ನು ಅವರೇ ಹಾಕಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಹೇಳಿದ್ದಾರೆ.

ಇಂದೂ ತಮಿಳುನಾಡಿಗೆ ಹರಿದ ಕಾವೇರಿ..

ಭಾರೀ ವಿರೋಧದ ನಡುವೆಯೂ 6ನೇ ದಿನವೂ ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುತ್ತಿದೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಕೆಆರ್‌ಎಸ್‌ನ ಡ್ಯಾಮ್‌ನ ನೀರಿನ ಮಟ್ಟ ಕುಸಿತದಿಂದ ರೈತರಿಗೆ ‘ಕಟ್ಟು ಪದ್ಧತಿ’ಯಲ್ಲೂ ನೀರಿಲ್ಲದಂತಾದ ಸ್ಥಿತಿ ಬಂದೊದಗಿದೆ. ಕಾವೇರಿ ನೀರನ್ನೇ ನಂಬಿರುವ ಮಂಡ್ಯ ಜನರ ಸ್ಥಿತಿ ನಿಜಕ್ಕೂ ಚಿಂತಾಜನಕವಾಗಿದೆ. ಕೆಆರ್‌ಎಸ್‌ನಲ್ಲಿ 6 ದಿನಕ್ಕೆ ಈಗಾಗಲೇ 2.5 ಟಿಎಂಸಿ ನೀರು ಖಾಲಿಯಾಗಿದ್ದು, 22 ಟಿಎಂಸಿಗೆ ಕುಸಿದಿದೆ. ಇದೇ ರೀತಿಯಾಗಿ ಮುಂದಿನ 9 ದಿನ ನೀರು ಬಿಟ್ರೆ 5 ಟಿಎಂಸಿ ನೀರು ಖಾಲಿಯಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.

ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಯುತ್ತಿರುವುದು.

ಅಲ್ಲದೆ 22 ಟಿಎಂಸಿಯಿಂದ 17 ಟಿಎಂಸಿಗೆ ಡ್ಯಾಮ್‌ನ ಮಟ್ಟ ಕುಸಿಯಲಿದೆ. ಇದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿ ಉಳಿಯುತ್ತದೆ, ಹಾಗೂ 12 ಟಿಎಂಸಿ ನೀರು ಮಾತ್ರ ಹಾಗೆ ಉಳಿಯುತ್ತದೆ. ಈ 12 ಟಿಎಂಸಿಯಲ್ಲಿ ಮಂಡ್ಯ ಜಿಲ್ಲೆಯ ರೈತರ ಬೆಳೆಗೆ ನೀರು ಹರಿಸುವುದು ಅಸಾಧ್ಯ.! ಬೆಳೆದ ಕಬ್ಬು, ಬಿತ್ತಿರುವ ಭತ್ತದ ಕಥೆಗಳೆಲ್ಲ ಮುಗಿದ ಅಧ್ಯಾಯವಾದಂತೆ ಆಗುತ್ತದೆ. ಇನ್ನೂ ನಾಲೆಗಳಿಗೆ ನೀರು ಬಿಡುವುದನ್ನು ನಿಲ್ಲಿಸಿರುವುದರಿಂದ ಈಗಾಗಲೇ ಬೆಳೆಗಳು ಒಣಗುತ್ತಿವೆ.

ರಾಜೀನಾಮೆ ಕೊಟ್ಟು ಮನೆಗೆ ಹೋಗಿ..

ಮೈಸೂರಲ್ಲೂ ಕಾವೇರಿ ಹೋರಾಟದ ಕಿಚ್ಚು ಜೋರಾಗಿದ್ದು, ಸಂಸದ ಪ್ರತಾಪಸಿಂಹ ಕಚೇರಿಗೆ ಮುತ್ತಿಗೆಗೆ ರೈತರು ಯತ್ನಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿರುವ ಕಚೇರಿಯ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೆ ಎಸ್ ಆರ್ ಪಿ ವಾಹನದಲ್ಲಿ ಆಗಮಿಸಿರುವ ಪೊಲೀಸರು ಪ್ರತಾಪಸಿಂಹ ಕಚೇರಿಗೆ ಬ್ಯಾರಿಕೇಡ್ ಹಾಕಿ ರೈತರನ್ನು ತಡೆದಿದ್ದಾರೆ. ನಾವು ರೈತರು ನಮ್ಮನೇಕೆ ತಡೆಯುತ್ತಿದ್ದೀರಿ? ನಾವು ನಮ್ಮ ಪಾಲಿನ ನೀರು ಕೇಳಲು ಬಂದಿದ್ದೀವಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಹಾಗೂ ಎಂಪಿಗಳು ದಿಕ್ಕಾರ ಕೂಗಿ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಘೋಷಣೆ ಕೂಗಿದ್ದಾರೆ.

ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಕಚೇರಿ ಮುತ್ತಿಗೆ ಹಾಕಲು ಮುಂದಾದ ರೈತರು.

ಗೋವಿಂದ.. ಗೋವಿಂದ.. ನೀರು ಗೋವಿಂದ…!

ಮಂಡ್ಯದ ಶ್ರೀರಂಗಪಟ್ಟಣದಲ್ಲೂ ರೈತಸಂಘದಿಂದ ಹಣೆಗೆ ನಾಮ ಹಾಕಿಕೊಂಡು, ಜಾಗಟೆ ಬಾರಿಸುತ್ತ ವಿನೂತನವಾಗಿ ಪ್ರತಿಭಟನೆ ನಡೆಸಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ಸರ್ಕಾರ ನಮಗೆ ನಾಮ ಹಾಕಿದೆ. ಕುಡಿಯಲು ನೀರಿಲ್ಲದಂತೆ ಮಾಡಿದೆ ಎಂದು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗೋವಿಂದ.. ಗೋವಿಂದ.. ನೀರು ಗೋವಿಂದ.. ಎಂದು ಘೋಷಣೆ ಕೂಗಿ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.

ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯಿಂದ ರೈತರ ಮರಣ ಶಾಸನ..

ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಕಾವೇರಿ ಕಿಚ್ಚು ಹೆಚ್ಚಾಗಿದ್ದು, ಕಾವೇರಿ ನಮ್ಮದು, ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆ ಕೂಗಿ ಸಂಸದರ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದ್ದಾರೆ.

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿ ಎದುರು, ಸರ್ಕಾರ ತಮಿಳುನಾಡಿನ ಗುಲಾಮಗಿರಿ ಮಾಡುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ಬರುವ ಮುನ್ನವೇ ತಮಿಳುನಾಡಿಗೆ ನೀರು ಬಿಡುತ್ತಿದೆ. ಕಾವೇರಿ ನಿರ್ವಹಣಾ ಮಂಡಳಿ ರಾಜ್ಯದ ರೈತರ ಮರಣ ಶಾಸನ ಬರೆಯುತ್ತಿದೆ. ಸರ್ಕಾರದ ಮಂತ್ರಿಗಳು, ಸಂಸದರು ರಾಜ್ಯದ ರೈತರ ಪರ ಧನಿ ಎತ್ತುತ್ತಿಲ್ಲ ಮೇಕೆದಾಟು ಅಣೆಕಟ್ಟು ಕಟ್ಟುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದು ಮಾತು ತಪ್ಪಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles