ಮಂಡ್ಯ : ತಮಿಳುನಾಡಿಗೆ ಕಾವೇರಿ ನೀರನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗಿಳಿದು ಇಂದು ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇಗುಲದ ಬಳಿಯ ಕಾವೇರಿ ನದಿಯಲ್ಲಿ ಪ್ರತಿಭಟನೆ ನಡೆದಿದ್ದು, ನೀರು ಬಿಟ್ಟ ರಾಜ್ಯ ಸರ್ಕಾರ ಮತ್ತು ಸಚಿವರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಕೂಡಲೇ ತಮಿಳು ನಾಡಿಗೆ ಹರಿಸ್ತಿರೋ ನೀರು ನಿಲ್ಲಿಸಲು ಒತ್ತಾಯ ಮಾಡಿದರು. ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲಾಡಳಿತ ಭವನದ ಬಳಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿರುವ ರೈತಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ಮಳೆಯ ಅಭಾವದಿಂದ ಕಾವೇರಿ, ಕಬಿನಿ ಜಲಾಶಯಗಳು ಭರ್ತಿಯಾಗಿಲ್ಲ, ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ನಾಡಿನ ರೈತರ ಕಣ್ಣುತಪ್ಪಿಸಿ ತಮಿಳುನಾಡಿಗೆ ಪ್ರತಿನಿತ್ಯ ನೀರು ಹರಿಸುತ್ತಿದೆ ಎಂದರು.
ಪರಿಸ್ಥಿತಿ ಹೀಗೇ ಮುಂದುವರೆದರೆ, ಮುಂಬರುವ ದಿನಗಳಲ್ಲಿ ನಮ್ಮ ರಾಜ್ಯದ ಬಹುತೇಕ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ರಾಜ್ಯ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆ ಲಾಭಕ್ಕಾಗಿ ತಮಿಳುನಾಡಿಗೆ ಗುಲಾಮಗಿರಿ ಮಾಡುತ್ತಿದೆ. ತಕ್ಷಣ ಇಂತಹ ಕಣ್ಣಮುಚ್ಚಾಲೆ ರಾಜಕೀಯ ಬಿಟ್ಟು, ಸರ್ಕಾರ ಈ ಕೂಡಲೇ ಕಬಿನಿ, ಕಾವೇರಿಯಿಂದ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾ ನಿರತ ರೈತರು ಸರ್ಕಾರಕ್ಕೆ ಒತ್ತಾಯಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.