ಬೆಂಗಳೂರು: ನಾಳೆ ನಡೆಯುವ ಪಿಯುಸಿ ಪರೀಕ್ಷೆಯಲ್ಲಿ ಸಮವಸ್ತ್ರ ಧರಿಸೋದು ಕಡ್ಡಾಯ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಭಗವಂತ ಒಳ್ಳೆ ಬುದ್ಧಿ ಕೊಟ್ಟು ಕಾಂಗ್ರೆಸ್‌ನವರು ಬಂದ್ ವಾಪಸ್ ಪಡೆದಿದ್ದಾರೆ. ಮಕ್ಕಳ ಭವಿಷ್ಯದಲ್ಲಿ ತುಂಬಾ ಪ್ರಮುಖವಾದದ್ದು ದ್ವಿತೀಯ ಪಿಯುಸಿ ಪರೀಕ್ಷೆ. ನಾಳಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಟ್ಟು 7,26,195 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ, ಕಲಾ ವಿಭಾಗದಲ್ಲಿ 2,34,815, ವಾಣಿಜ್ಯ 2,47,260, ವಿಜ್ಞಾನ ವಿಭಾಗದಲ್ಲಿ 2,44,120 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
ಈ ಬಾರಿಯೂ ಸಮವಸ್ತ್ರ ನೀತಿ ಜಾರಿಯಾಗಿದ್ದು, ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆಗೆ ಅವಕಾಶ ಇಲ್ಲ ಎಂದು ಮಾಹಿತಿ ನೀಡಿದರು. ಕಳೆದ ವರ್ಷ 6 ವಿದ್ಯಾರ್ಥಿನಿಯರು ಹಿಜಾಬ್ ವಿವಾದದಿಂದ ಪರೀಕ್ಷೆ ಬರೆದಿಲ್ಲ. ಮಾಧ್ಯಮದ ಮೂಲಕ ಅವರಿಗೆ ಪರೀಕ್ಷೆ ಬರೆಯುವಂತೆ ಮನವಿ ಮಾಡಿಕೊಳ್ಳುತ್ತೇನೆ. ಇನ್ನೂ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಕ್ರಮ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಮೊಬೈಲ್, ವಾಚ್ ತರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.