ಬೆಂಗಳೂರು: ಕೋವಿಡ್ ವಿಚಾರದಲ್ಲಿ ಜನರ ಮಧ್ಯೆ ಗೊಂದಲ ಸೃಷ್ಟಿ ಮಾಡಬಾರದು. ಜನರಿಗೆ ಆತಂಕ ತರಿಸಬಾರದು ಎಂದು ಶಾಸಕ ಯು.ಟಿ.ಖಾದರ್ ಸರ್ಕಾರಕ್ಕೆ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜನರಿಗೆ ಮಾಸ್ಕ್ ಹಾಕಿ ಎನ್ನುವ ಬದಲು ಒಂದಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳುವ ಕೆಲಸ ಮಾಡಲಿ. ಆಕ್ಸಿಜನ್ ಪ್ಲಾಂಟ್ ಕ್ವಾಲಿಟಿ ಚೆಕ್ ಮಾಡಿಕೊಳ್ಳಬೇಕು. ಅನುಷ್ಠಾನ ಮಾಡುವಾಗ ದೂರದೃಷ್ಟಿ ಆಲೋಚನೆ ಆಗಬೇಕು. ಗಡಿಬಿಡಿಯಲ್ಲಿ ಸರ್ಕಾರ ಕೆಲಸ ಮಾಡಬಾರದು ಎಂದರು.
ಭಯದ ವಾತಾವರಣದಲ್ಲಿ ಸಿಲುಕಿಸುವ ಕೆಲಸ ಆಗಬಾರದು. ಯಾವ ದೇಶದಲ್ಲಿ ದೊಡ್ಡ ಅನಾಹುತ ಆಗಿದೆ ಎಂದು ಮಾಹಿತಿ ಬಂದಿಲ್ಲ. ಈ ಸೋಂಕಿನ ತೀವ್ರತೆ, ಸಾವು ಎಷ್ಟು ಆಗುತ್ತೆ ಅನ್ನೋದನ್ನ ಮಾಹಿತಿ ತಿಳಿಸಬೇಕು. ಚಳಿಗಾಲದಲ್ಲಿ ಕೆಲ ಸೋಂಕು ಬಂದು ಹೋಗುತ್ತೆ ಎಂದು ಹೇಳಿದರು.
ಮಾಧ್ಯಮಗಳು, ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದೇ ನಿಜ ಎಂದು ತಿಳಿಯಬಾರದು. ಚೈನಾದಲ್ಲಿ ಪರಿಸ್ಥಿತಿ ಏನಾಗಿದೆ ಅಂತ ನೋಡ್ಬೇಕು. ಜನರಿಗೆ ಜಾಗೃತಿ ಮೂಡಿಸಬೇಕು ಎಂದರು. ಬಿಎಫ್ 7 ಬಗ್ಗೆ ತಳಿಯಿಂದ ಹೇಗೆ ಜಾಗೃತಿ ಆಗಬೇಕು ಎಂದು ಸರ್ಕಾರ ತಿಳಿಸಲಿ. ಯಾವುದೇ ದೇಶದಲ್ಲಿ ದೊಡ್ಡ ಮಟ್ಟದ ಅನಾಹುತದ ಬಗ್ಗೆ ಮಾಹಿತಿ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿರುವ ಮಾಹಿತಿ ಬಗ್ಗೆ ಸರ್ಕಾರ ಸ್ಪಷ್ಟತೆ ಕೊಡಲಿ ಎಂದು ತಿಳಿಸಿದರು.