ರಾಮನಗರ: ಇಷ್ಟು ವರ್ಷ ರಾಮನಗರ ಜನರು ಕಾಂಗ್ರೆಸ್, JDSಗೆ ಮತ ನೀಡಿದ್ದೀರಿ. ಆದರೆ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆ ಅನ್ನೋದು ಯೋಚಿಸಬೇಕಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಬೆಂಗಳೂರು-ಮೈಸೂರು ಹೈವೇ ನಿರ್ಮಾಣದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪರಿಶ್ರಮವಿದ್ದು, ಸ್ಥಳೀಯ ಸಂಸದ ಹಾಗೂ ಶಾಸಕ ಏನು ಮಾಡಿದ್ದಾರೆಂದು ಕಿಡಿಕಾರಿದರು. ತಾಲೂಕಿನ ಬಿಡದಿಯಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಳ್ಳಮಳ್ಳ ಇದ್ದ ಹಾಗೆ, ಇದೀಗ ಜೋಡೆತ್ತು ಹೋಗಿ ಕುಂಟೆತ್ತು ಆಗಿದೆ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಹತ್ತು ತಿಂಗಳಿಗೆ ನೆಗೆದು ಬಿತ್ತು ಎಂದು ವಾಗ್ದಾಳಿ ಮಾಡಿದರು.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರ ಹಿಡಿಯಲಿದೆ. ಈ ಬಾರಿ ಜೆಡಿಎಸ್ ಪಕ್ಷ ಅರಬ್ಬೀ ಸಮುದ್ರದ ಒಳಗೆ ಸೇರುತ್ತದೆ. ಮುಂದಿನ ದಿನಗಳಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ ನಿಮ್ಮದಲ್ಲ, ಕಮಲದ ಪಾಲಾಗುತ್ತದೆ ಎಂದು ಹರಿಹಾಯ್ದರು. ಮಾ.12ರಂದು ಹೈವೇ ಉದ್ಘಾಟನೆಗೆ ಪ್ರಧಾನಿ ಮೋದಿ ಬರುತ್ತಾರೆ. ಬಿಜೆಪಿಗೆ ಮತ ಹಾಕಿ ರಾಮನಗರ ಅಭಿವೃದ್ಧಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.