ಬೆಂಗಳೂರು : ಸಿದ್ದರಾಮಯ್ಯ ಅವರಿಗೆ ಛಲ, ಗೌರವ ಇದ್ದರೆ ಬಾದಾಮಿ ಅಥವಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ಸವಾಲು ಹಾಕಿದರು.
ಜಗಜ್ಯೋತಿ ಬಸವಣ್ಣ ಮತ್ತು ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಿಸುವ ಸಂಬಂಧ ಸಚಿವ ಆರ್.ಅಶೋಕ್ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿದರು. ಸಿದ್ದರಾಮಯ್ಯ ಅವರು ಪದೇ ಪದೇ ಕ್ಷೇತ್ರ ಪಲಾಯನ ಯಾಕೆ ಮಾಡುತ್ತಿದ್ದಾರೆ? ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ರೀತಿ ದಿಕ್ಕು ಕಾಣದೆ ಅಲೆಯುತ್ತಿರುವ ನಾಯಕ ಎಂದು ಲೇವಡಿ ಮಾಡಿದ್ದಾರೆ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹೀನಾಯ ಸೋಲು ಕಂಡರು. ಚಾಮುಂಡೇಶ್ವರಿ ಕ್ಷೇತ್ರವನ್ನು ಯಾಕೆ ತೊರೆದರು ಎಂದು ಜನರು ಕೂಡ ಕೇಳುತ್ತಿದ್ದಾರೆ. ಒಂದು ವೇಳೆ ಅಭಿವೃದ್ಧಿ ಕಾರ್ಯ ಮಾಡಿದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೆ ಸೋಲು ಅನುಭವಿಸಿದರು? ಎಂದು ಪ್ರಶ್ನಿಸಿದರು.
ಒಂದು ಕಡೆ ನಿಂತು ರಾಜಕಾರಣ ಮಾಡಬೇಕು. ಕ್ಷೇತ್ರದ ಜನತೆ ಮೇಲೆ ವಿಶ್ವಾಸ ಇಟ್ಟು, ನಿರ್ದಿಷ್ಟಕೆಲಸ ಮಾಡಿಕೊಡುತ್ತೇನೆ ಎಂಬುದಾಗಿ ಹೇಳಿ ಮಾಡಿಕೊಡಬೇಕು. ಅದು ಬಿಟ್ಟು ಕೆಲಸ ಮಾಡದೆ ಕ್ಷೇತ್ರಕ್ಕಾಗಿ ಅಲೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಜಗಜ್ಯೋತಿ ಬಸವಣ್ಣ ಮತ್ತು ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. 24 ಅಡಿ ಎತ್ತರದ ಎರಡು ಅಶ್ವಾರೂಢ ಪುತ್ಥಳಿ ಒಟ್ಟು ಎಂಟು ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.