ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೈಕಮಾಂಡ್ ನಾಯಕರು ನೀಡಿದ್ದಾರೆ. ರಾಜ್ಯದಲ್ಲಿಯ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಮೊದಲ ಗುರಿಯಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನೂತನ ನಾಯಕ ಆರ್.ಅಶೋಕ್ ಗುಡುಗಿದ್ದಾರೆ.
ತಾವು ವಿಪಕ್ಷನಾಯಕರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಪಾಪರ್ ಆಗಿ ದಿವಾಳಿಯಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಅವರ ಮಗ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಮತದಾರರಿಗೆ ಬಿಜೆಪಿ ಹಣ, ಮದ್ಯ ಹಂಚುತ್ತಿದೆ: ಕಮಲ್‌ನಾಥ್ ಆರೋಪ
ನಮ್ಮ ಸರ್ಕಾರವಿದ್ದಾಗ ರೈತರಿಗೆ ಹೆಚ್ಚಿನ ಬರ ಪರಿಹಾರ ನೀಡಿದ್ದೇವೆ. ಆದರೆ ರಾಜ್ಯ ಸರ್ಕಾರ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದೆ. ಸರ್ಕಾರದ ಖಜಾನೆ ಖಾಲಿಯಾಗಿದೆ, ರೈತರಿಗೆ ಹಣ ನೀಡಲು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ, ಆದರೆ ಮುಖ್ಯಮಂತ್ರಿ ಹುದ್ದೆಗಾಗಿಯೇ ಸಿಎಂ ಹಾಗೂ ಡಿಸಿಎಂ ನಡುವೆ ಪೈಪೋಟಿ ನಡೆಯುತ್ತಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಬಿಜೆಪಿ ಶಾಸಕರ ಅನುದಾನದಲ್ಲಿ ಕಡಿತ ಗೊಳಿಸಲಾಗಿದೆ. ಸರ್ಕಾರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಸ್ವತಃ ಆಡಳಿತ ಪಕ್ಷದ ಶಾಸಕರೇ ಗೋಳು ತೋಡಿಕೊಂಡಿದ್ದಾರೆ. ನಾವು ಯಾರ ಬಗ್ಗೆಯೂ ದ್ವೇಷ ಪಡುವುದಿಲ್ಲ, ಎಲ್ಲರ ಸಹಕಾರ ಹಾಗೂ ವಿಶ್ವಾಸದೊಂದಿಗೆ ಕೆಲಸ ಮಾಡುತ್ತೇವೆ. ನೀವು ಮಾಡುತ್ತಿರುವ ದ್ವೇಷಕ್ಕೆ ಮದ್ದಿಲ್ಲ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ನಮ್ಮ ಹಾಗೂ ಜೆಡಿಎಸ್ ಶಾಸಕರು ಸೇರಿ ಎಲ್ಲರೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಸಮರ್ಥ ವಿರೋಧ ಪಕ್ಷವಾಗಿ ರಾಜ್ಯದಲ್ಲಿ ಕೆಲಸ ಮಾಡುತ್ತೇವೆ. ಇಂದಿರಾಗಾಂಧಿ ದುರಾಡಳಿತ ಹಾಗೂ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಜೈಲು ವಾಸ ಅನುಭವಿಸುತ್ತಿದ್ದೆ. 20 ವರ್ಷಗಳಿಂದಲೂ ನಾನು ಪಕ್ಷದ ವಿವಿಧ ಘಟಕಗಳಲ್ಲಿ ಕೆಲಸ ಮಾಡಿರುವುದನ್ನು ಗಮನಿಸಿ ನನಗೆ ಹೈಕಮಾಂಡ್ ನಾಯಕರು ಅವಕಾಶ ಮಾಡಿಕೊಟ್ಟಿದ್ದಾರೆ. ಒಂದೇ ಪಕ್ಷ,ಒಂದೇ ಚಿಹ್ನೆ ಹಾಗೂ ಒಂದೇ ಸಿದ್ದಾಂತದಡಿಯಲ್ಲಿ ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದು ಕ್ಷೇತ್ರಕ್ಕೆ ಜನರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ : ಜ್ಞಾನ, ಅರ್ಹತೆಯೇ ಇಲ್ಲದ ನಕಲಿ ಸಾಮ್ರಾಟನಿಗೆ ವಿಪಕ್ಷ ನಾಯಕ ಸ್ಥಾನ: ಕಾಂಗ್ರೆಸ್ ಲೇವಡಿ
ದೇಶದ ಇತಿಹಾಸದಲ್ಲಿ ಯಾವುದೇ ಸರ್ಕಾರ ಹನಿಮೂನ್ ಪೀರಿಯಡ್ ನಲ್ಲಿರುತ್ತದೆ. ಆದರೆ ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದ ನಂತರ ಅಂಗಡಿ ತೆಗೆದು ಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲದಾಗಿದೆ ಎಂದು ಹರಿಹಾಯ್ದಿದ್ದಾರೆ.
ಸರ್ಕಾರ ಬಂದ ನಂತರ ಒಂದು ಕಿಲೋ ಮೀಟರ್ ರಸ್ತೆ ಮಾಡಿಲ್ಲ, ಶಾಲೆ ನಿರ್ಮಾಣ ಮಾಡಿಲ್ಲ, ಒಂದೇ ಒಂದು ನೀರಾವರಿ ಯೋಜನೆ ಆಗಿಲ್ಲ. ಸರ್ಕಾರ ಬದುಕಿದೆಯೋ ಸತ್ತಿದೆಯೋ ಎಂಬುದನ್ನು ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಜನರಿಗೆ ಬರ ಸೇರಿದಂತೆ ನ್ಯಾಯಯುತವಾಗಿ ಸೇರಬೇಕಾದ ಪರಿಹಾರ ಒದಗಿಸಲು ಬಿಜೆಪಿ ವತಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಕಮಿಷನ್, ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಮೂಲಕ ಬಿಸಿ ಮುಟ್ಟಿಸುತ್ತೇವೆ.ಅವರ ಹಗರಣಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಗುತ್ತಿಗೆದಾರರು ಧರಣಿ ನಡೆಸಿ ಆತ್ಮಹತ್ಯೆಯ ಬಗ್ಗೆ ಮಾತನಾಡಿದ್ದನ್ನು ನೋಡಿದಾಗ ಕಾಂಗ್ರೆಸ್ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ ಎಂಬುವುದು ಸ್ಪಷ್ಟವಾಗುತ್ತದೆ. ಹೋರಾಟವೇ ನಮ್ಮ ಮುಂದಿನ ಗುರಿಯಾಗಿದೆ. ರಾಜ್ಯದ ಬಡವರ ಪರ ಕೆಲಸ ಮಾಡುತ್ತೇನೆ ಎಂದು ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.