ಬೆಂಗಳೂರು: ಬಹುದಿನಗಳಿಂದ ಖಾಲಿ ಇದ್ದ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಿಜೆಪಿ ನಾಯಕ ಆರ್.ಅಶೋಕ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರ್.ಅಶೋಕ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಬಂದು ಹಲವು ತಿಂಗಳಾಗಿದ್ದರೂ ವಿಧಾನಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆಯಾಗಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಚೊಚ್ಚಲ ಅಧಿವೇಶನವು ವಿಪಕ್ಷ ನಾಯಕನ ಅನುಪಸ್ಥಿತಿಯಲ್ಲೇ ಪೂರ್ಣಗೊಂಡಿತ್ತು.
ವಿಪಕ್ಷ ನಾಯಕನ ಸ್ಥಾನ ಖಾಲಿ ಇರುವ ವಿಚಾರವನ್ನೇ ಕಾಂಗ್ರೆಸ್ ದಾಳವಾಗಿ ಬಳಸಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿತ್ತು. ಚಳಿಗಾಲದ ಅಧಿವೇಶನ ಹಾಗೂ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ವಿಪಕ್ಷ ನಾಯಕನ ಸ್ಥಾನ ಕೊನೆಗೂ ಭರ್ತಿಯಾಗಿದೆ.
ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕರಾಗಿರುವ ಆರ್.ಅಶೋಕ್ ಅವರನ್ನೇ ವಿಪಕ್ಷ ನಾಯಕ ಸ್ಥಾನಕ್ಕೆ ಹೈಕಮಾಂಡ್ ಆಯ್ಕೆ ಮಾಡಿದೆ. ಅಶೋಕ್ ಅವರು ವಿಪಕ್ಷ ನಾಯಕ ಸ್ಥಾನದ ರೇಸ್‌ನಲ್ಲಿದ್ದಾರೆ ಎಂದು ಒಂದು ತಿಂಗಳಿನಿಂದ ಮಾತು ಕೇಳಿಬರುತ್ತಿತ್ತು.
ಇದನ್ನೂ ಓದಿ: ಜೆಡಿಎಸ್‌ನಿಂದ ಸಿಎಂ ಇಬ್ರಾಹಿಂ ಅಮಾನತು!
ಬಿಜೆಪಿ ನಾಯಕರಾದ ಸಿ.ಎನ್.ಅಶ್ವತ್ಥನಾರಾಯಣ, ವಿ.ಸುನೀಲ್ ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರ ಹೆಸರು ವಿಪಕ್ಷ ನಾಯಕನ ಕುರ್ಚಿಯ ಸುತ್ತ ಸುತ್ತುತ್ತಿತ್ತು. ಇದೀಗ ಕೊನೆಗೂ ಆ ಕುರ್ಚಿ ಆರ್.ಅಶೋಕ್ ಅವರ ಪಾಲಾಗಿದೆ.
ತಿಂಗಳುಗಳಿಂದ ಖಾಲಿ ಉಳಿದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗಷ್ಟೇ ಬಿ.ವೈ.ವಿಜಯೇಂದ್ರ ಅವರನ್ನು ಹೈಕಮಾಂಡ್ ನೇಮಕ ಮಾಡಿತ್ತು. ಒಟ್ಟಾರೆ ಲಿಂಗಾಯತ ಹಾಗೂ ಒಕ್ಕಲಿಗ ನಾಯಕರಿಗೆ ಬಿಜೆಪಿ ಹಿರಿಯ ಹುದ್ದೆಗಳು ಸಿಕ್ಕಿವೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.