ಬೆಂಗಳೂರು: ವಿಧಾನಸಭೆ ಚುನಾವಣೆ ಯಶಸ್ಸಿನ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹಾಗೂ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಾಲಿಕೆ ವ್ಯಾಪ್ತಿಯ ಬಿಜೆಪಿ ಪ್ರಭಾವಿ ಶಾಸಕರ ಆಪ್ತರು ಮತ್ತು ಬೆಂಬಲಿಗರನ್ನು ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಆರ್.ಅಶೋಕ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಆಪ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ‘ನನ್ನನ್ನು ನಂಬಿ ಕಾಂಗ್ರೆಸ್ ಗೆ ಬಂದಿದ್ದೀರಾ, ನಿಮಗೆಲ್ಲಾ ಉನ್ನತ ಸ್ಥಾನ ಸಿಗುತ್ತೆ’ ಎಂದು ಹೇಳಿದರು.
ಇದನ್ನೂ ಓದಿ; ‘ಸಂವಿಧಾನ ವಕೀಲರ ದಾಖಲೆ ಪುಸ್ತಕವಲ್ಲ; ನಮ್ಮೆಲ್ಲರ ಬದುಕಿಗೆ ಅನಿವಾರ್ಯ’
‘ಇಡೀ ದೇಶದಲ್ಲಿ ಇಂದು ಪ್ರಜಾಪ್ರಭುತ್ವ ದಿನ ಆಚರಣೆ ಮಾಡುತ್ತಿದ್ದೇವೆ. 2024ರಲ್ಲಿ ಕಾಂಗ್ರೆಸ್ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಪೀಠಿಕೆ ಪ್ರಾರಂಭ ಮಾಡಿದ್ದೇವೆ. ಸರಿಯಾದ ಸಮಯಕ್ಕೆ ಸರಿಯಾಗಿ ನಿರ್ಧಾರ ಮಾಡಬೇಕು. ಕಬಡ್ಡಿ ಬಾಬುಗೆ (ಹೆಚ್‌ಡಿಕೆ ಆಪ್ತ) ಪಲ್ಲಕ್ಕಿ ಏರುವ ಕಾಲ ಬಂದಿದೆ. ವಿಶ್ವ ಪ್ರಜಾಪ್ರಭುತ್ವ ದಿನ ಹೇಳುತ್ತಾ ಇದ್ದೇನೆ. ನೀವು ಆಯ್ಕೆ ಮಾಡಿರುವ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಬರೆದಿಟ್ಟುಕೊಳ್ಳಿ. ಎಲ್ಲರನ್ನೂ ಒಟ್ಟಿಗೆ ತಗೆದುಕೊಂಡು ಕಾರ್ಪೋರೆಟ್ ಗಳನ್ನು ಗೆಲ್ಲಿಸುವುದು ನಿಮ್ಮ ಮುಂದಿನ ಗುರಿ’ ಎಂದರು.
‘ಸರ್ಕಾರ ನಿಮ್ಮ ಪರವಾಗಿ ಇರುತ್ತೆ; ರಾಷ್ಟ್ರಮಟ್ಟದಲ್ಲಿ ಹಲವು ಪ್ರಯತ್ನ ನಡೆಯುತ್ತಿದೆ. 120 ದಿನಗಳಿಂದ ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಕೊಳ್ಳಲು ಆಗಿಲ್ಲ. ಈಗ ಬೇರೆ ಪಕ್ಷದ ನಾಯಕತ್ವ ತೆಗೆದುಕೊಳ್ಳಲು ಹೋಗುತ್ತಿದ್ದಾರೆ. ಮೈತ್ರಿ ಸರ್ಕಾರ ಬೀಳಿಸಿದವರ ಜೊತೆ ಒಂದಾಗುತ್ತಿದ್ದಾರೆ. ಯಾರ ಜೊತೆಯಾದ್ರು ಮೈತ್ರಿ ಮಾಡಿಕೊಳ್ಳಲಿ, ಹೊಂದಾಣಿಕೆ ಆದ್ರೂ ಮಾಡಿಕೊಳ್ಳಲಿ’ ಎಂದು ಜೆಡಿಎಸ್‌ಗೆ ತಿರುಗೇಟು ಕೊಟ್ಟರು.
ಇದನ್ನೂ ಓದಿ; ಇಂದು ‘ಕೈ’ ಹಿಡಿಯಲಿದ್ದಾರೆ ಅಶೋಕ್, ಹೆಚ್‌ಡಿಕೆ ಬೆಂಬಲಿಗರು!
‘ನನ್ನನ್ನು ನಂಬಿ ಕಾಂಗ್ರೆಸ್ ಗೆ ಬಂದಿದ್ದೀರಾ, ನಿಮಗೆಲ್ಲಾ ಉನ್ನತ ಸ್ಥಾನ ಸಿಗುತ್ತೆ. ಬೆಂಗಳೂರಿಗೆ ನೀವೆಲ್ಲಾ ಶಕ್ತಿ. ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೀರಿ, ನಿಮ್ಮ ಭವಿಷ್ಯ ಉತ್ತಮವಾಗಲಿದೆ. ಮುಖ್ಯಮಂತ್ರಿಗಳಿಗೆ ನಿಮ್ಮ ಬಗ್ಗೆ ತಿಳಿಸಿ ನಿಮ್ಮೆಲ್ಲರ ಮಾಹಿತಿ ಕೊಟ್ಟಿದ್ದೀನಿ. ಪದ್ಮನಾಭನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಾವೆಲ್ಲಾ ಬರುತ್ತೇವೆ’ ಎಂದು ಭರವಸೆ ನೀಡಿದರು.
‘ನಿಮಗೆಲ್ಲಾ ಒಳ್ಳೆಯ ಭವಿಷ್ಯ ಇದೆ, ಸಾಕಷ್ಟು ಜನ ಕಾರ್ಪೊರೇಟ್ ಗಳು ನನಗೆ ಆಪ್ತರು. ನಿಮ್ಮ ನಮ್ಮ ಸಂಬಂಧ ಗಟ್ಟಿಯಾಗಿ ಇರಲಿ. ತಾಳ್ಮೆಯಿಂದ ಇರಿ ಯಶಸ್ಸು ಬರಲಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಿಮ್ಮನ್ನು ಹೃದಯತುಂಬಿ ಒಟ್ಟಿಗೆ ತಗೆದುಕೊಳ್ಳುತ್ತಿದ್ದೇವೆ. ಒಟ್ಟಿಗೆ ಸೇರಿ ಚರ್ಚೆ ಮಾಡೋಣ, ಯಶಸ್ಸು ಪಡೆಯೋಣ. ನಾವೆಲ್ಲಾ ಸೇರಿ ನಿಮ್ಮನ್ನು ಯಶಸ್ಸಿನ ಕಡೆ ಕರೆದುಕೊಂಡು ಹೋಗುತ್ತಿದ್ದೇವೆ’ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.