ಸೂರತ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲ್ಮನವಿ ಅರ್ಜಿಯ ವಿಚಾರಣೆಗೆ ಸೂರತ್ನ ಸೆಷನ್ಸ್ ಕೋರ್ಟ್ ಸಮ್ಮತಿ ನೀಡಿದೆ. ಜೊತೆಗೆ ಜಾಮೀನನ್ನು ಏಪ್ರಿಲ್ 13ರ ವರೆಗೆ ವಿಸ್ತರಿಸಿದೆ.
ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ರಾಹುಲ್ ರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಲಾಗಿತ್ತು. ನಾನು ಕ್ಷಮೆ ಕೇಳುವ ಪ್ರಮೇಯ ಬರೋದಿಲ್ಲ ಎಂದು ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಈ ವಿಚಾರವಾಗಿ ರಾಹುಲ್ ಸೂರತ್ ಸೆಷನ್ಸ್ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಶಿಕ್ಷೆಗೆ ಒಳಪಟ್ಟಿದ್ದಕ್ಕೆ ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಕೆಲವೇ ದಿನಗಳಲ್ಲಿ, ಸಂಸದರ ಅಧಿಕೃತ ನಿವಾಸವನ್ನು ತೊರೆಯುವಂತೆಯೂ ಸೂಚಿಸಲಾಗಿತ್ತು. ಅಂದಹಾಗೆ ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ವಿಚಾರ ವಾಗಿ ಕಾಂಗ್ರೆಸ್ ಪ್ರತಿಭಟನೆ ಮುಂದುವರಿದಿದೆ.
ಪ್ರಧಾನಿ ಮೋದಿ ಲಲಿತ್ ಮೋದಿ ಮತ್ತು ನೀರವ್ ಮೋದಿಯನ್ನು ಉಲ್ಲೇಖಿಸಿ ಎಲ್ಲಾ ಕಳ್ಳರಿಗೂ ಮೋದಿ ಎಂಬ ಸರ್ ನೇಮ್ ಯಾಕಿದೆ ಎಂದು ರಾಹುಲ್ ಕೇಳಿದ್ದರು. ಇದು ಇತರೆ ಹಿಂದುಳಿದ ವರ್ಗಗಳಿಗೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿತ್ತು. ಗುಜರಾತ್‌ನ ಬಿಜೆಪಿ ನಾಯಕ ಪೂರ್ಣೇಶ್ ಮೋದಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.