ನವದೆಹಲಿ : ಭಾರತ ಐತಿಹಾಸಿಕ ಜಿ20 ಶೃಂಗಸಭೆಗೆ ಸರ್ವ ಸನ್ನದ್ಧವಾಗಿರುವ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯುರೋಪ್ ಪ್ರವಾಸ ಕೈಗೊಂಡಿದ್ದಾರೆ.
ಒಂದು ವಾರಗಳ ಭೇಟಿಗಾಗಿ ಮಂಗಳವಾರ ರಾಹುಲ್ ಗಾಂಧಿ ಯುರೋಪ್ ಗೆ ತೆರಳಿದ್ದಾರೆ. ಅಲ್ಲಿ ರಾಹುಲ್ ಯುರೋಪಿಯನ್ ಯೂನಿಯನ್ (ಇಯು) ವಕೀಲರು, ವಿದ್ಯಾರ್ಥಿಗಳು ಮತ್ತು ಭಾರತೀಯ ವಲಸಿಗರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 7 ರಂದು ಬ್ರಸೆಲ್ಸ್‌ನಲ್ಲಿ ಯುರೋಪಿಯನ್ ಯೂನಿಯನ್ ವಕೀಲರನ್ನು ರಾಹುಲ್ ಭೇಟಿಯಾಗಲಿದ್ದಾರೆ. ಹೇಗ್‌ನಲ್ಲಿಯೂ ವಕೀಲರ ಜೊತೆ ಸಭೆ ನಡೆಸಲಿದ್ದಾರೆ. ಸೆಪ್ಟೆಂಬರ್ 8 ರಂದು ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ : ರಾಹುಲ್‌ಗೆ ಲೋಕಸಭಾ ಸದಸ್ಯತ್ವ ಮರಳಿ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ!
ಸೆಪ್ಟೆಂಬರ್ 9 ರಂದು ಪ್ಯಾರಿಸ್‌ನಲ್ಲಿ ಫ್ರಾನ್ಸ್‌ನ ಲೇಬರ್ ಯೂನಿಯನ್‌ನ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ನಂತರ ಅವರು ನಾರ್ವೆಗೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 10 ರಂದು ಓಸ್ಲೋದಲ್ಲಿ ಡಯಾಸ್ಪೊರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜಿ20 ಶೃಂಗಸಭೆ ಮುಗಿದ ಒಂದು ದಿನದ ನಂತರ, ಅಂದರೆ ಸೆಪ್ಟೆಂಬರ್ 11ರಂದು ರಾಹುಲ್ ಗಾಂಧಿ ಭಾರತಕ್ಕೆ ಹಿಂದಿರುಗುವ ಸಾಧ್ಯತೆಯಿದೆ. ಜಿ20 ನಾಯಕರ ಶೃಂಗಸಭೆ ಸೆಪ್ಟೆಂಬರ್ 9 ಮತ್ತು10ರಂದು ದೆಹಲಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಬಾಂಗ್ಲಾ ದೇಶದ ಅಧ್ಯಕ್ಷೆ ಶೇಕ್ ಹಸೀನಾ ಸೇರಿದಂತೆ ಗಣ್ಯಾತಿ ಗಣ್ಯರು ಭಾಗವಹಿಸಲಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.