ನವದೆಹಲಿ: ಎರಡನೇ ಅವಧಿಯ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿ ನಾಯಕರು ಪ್ರಸ್ತಾಪಿಸಿದ್ದಾರೆ.
ಇಂದು ಸದನ ಆರಂಭವಾಗುತ್ತಿದ್ದಂತೆ ರಾಹುಲ್ ಗಾಂಧಿ ನೀಡಿದ ಹೇಳಿಕೆಯಿಂದ ಗದ್ದಲಕ್ಕೆ ವೇದಿಕೆಯಾಯಿತು. ಸದನ ಆರಂಭವಾಗುತ್ತಿದ್ದಂತೆ ಗದ್ದಲ ಏರ್ಪಟ್ಟ ಹಿನ್ನೆಲೆ ಕಲಾಪ ನಾಳೆಗೆ ಮುಂದೂಡಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಪಿಯೂಷ್ ಗೋಯಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ರಾಹುಲ್ ಗಾಂಧಿ ದೇಶದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಆಗ್ರಹದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಂಸತ್‌ನ ಉಭಯ ಸದನಗಳ ಕಾರ್ಯ ಕಲಾಪಗಳನ್ನು ಮುಂದೂಡಲಾಯಿತು. ಲಂಡನ್‌ನ ಕೇಂಬ್ರಿಡ್ಜ್ ವಿವಿಯಲ್ಲಿ ಭಾಷಣ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದ್ದರು.
ಲೋಕಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಹುಲ್ ಗಾಂದಿ ಲಂಡನ್‌ನಲ್ಲಿ ಭಾರತಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಇನ್ನೂ ಕಾಂಗ್ರೆಸ್ ನವರು ಗ್ಯಾಸ್ ಸೇರಿದಂತೆ ಅಗತ್ಯ ಬೆಲೆಗಳ ಏರಿಕೆ ಹಾಗೂ ವಿಪಕ್ಷ ನಾಯಕರ ಮೇಲೆ ತನಿಖಾ ಸಂಸ್ಥೆಗಳ ದಾಳಿಯ ಬಗ್ಗೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದರು.