ನವದೆಹಲಿ : ಮೋದಿಯವರನ್ನು ಹೀಯಾಳಿಸಿದ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಜೊತೆಗೆ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ. ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಏಪ್ರಿಲ್ 12 ರಂದು ಪಾಟ್ನಾ ಹೈಕೋರ್ಟ್‌ಗೆ ಹಾಜರಾಗಬೇಕಾಗಿದೆ.
ರಾಹುಲ್ ಗಾಂಧಿ ವಿರುದ್ಧ ಮಾಜಿ ಸಚಿವ ಪೂರ್ಣೇಶ್ ಮೋದಿ ಸೂರತ್‌ನಲ್ಲಿ ದೂರು ದಾಖಲಿಸಿದ್ದರು. ಅದೇ ವರ್ಷ ಸುಶೀಲ್ ಮೋದಿ ಪಾಟ್ನಾದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅಂದಹಾಗೆ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡ ರಾಹುಲ್ ಗಾಂಧಿ ಪರವಾಗಿ ವಿವಿಧ ಪಕ್ಷಗಳ ನಾಯಕರು ಬೆಂಬಲಕ್ಕೆ ಬಂದಿದ್ದಾರೆ.
ಕರ್ನಾಟಕದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ರಾಹುಲ್ ಅನರ್ಹತೆಯನ್ನು ಖಂಡಿಸಿದ್ದಾರೆ. ಇನ್ನೂ ಇದೇ ವಿಚಾರವಾಗಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ ಆಕ್ರೋಶಿಸಿದ್ದಾರೆ.
ಆಪ್ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ರಾಹುಲ್ ಅನರ್ಹತೆ ಖಂಡಿಸಿದ್ದಾರೆ. ಇಂದು ತುಂಬಾ ಅಪಾಯಕಾರಿ ಬೆಳವಣಿಗೆಯಾಗಿದೆ. ಇದು ಸರ್ವಾಧಿಕಾರಿಯ ವರ್ತನೆ ಮತ್ತು ಇದೊಂದು ಅತ್ಯಂತ ಹೇಡಿತನದ ಸರ್ಕಾರ. ಈ ಪ್ರಜಾಸತ್ತಾತ್ಮಕವಲ್ಲದ ಆಡಳಿತದ ವಿರುದ್ಧ ಹೋರಾಡುವ ಜವಾಬ್ದಾರಿ ಜನರ ಮೇಲಿದೆ ಎಂದು ಹೇಳಿದ್ದಾರೆ.