ಹೈದ್ರಾಬಾದ್ : ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳಕ್ಕೆ ಭೇಟಿ ನೀಡಿದ ನಂತರ ಈ ವಾರ ರಾಹುಲ್ ಗಾಂಧಿ ಅವರು ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ನಡೆಸುತ್ತಿದ್ದಾರೆ. ಇಂದು ಧರ್ಮಪುರದಿಂದ ಭಾರತ್ ಜೋಡೋ ಯಾತ್ರೆಯನ್ನು ಪುನಾರಂಭಿಸಿದ ರಾಹುಲ್ ಬುಡಕಟ್ಟು ಜನಾಂಗದವರೊಂದಿಗೆ ಸಾಂಪ್ರದಾಯಿಕ ನೃತ್ಯವನ್ನು ಮಾಡಿದ್ದಾರೆ.
ಈ ನೃತ್ಯದ ವೀಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ ಅವರು, ನಮ್ಮ ದೇಶದ ಆದಿವಾಸಿಗಳು, ನಮ್ಮ ಕಾಲಾತೀತ ಸಂಸ್ಕೃತಿಗಳು ಮತ್ತು ವೈವಿಧ್ಯತೆಯ ಭಂಡಾರ. ಕೋಯಾ ಬುಡಕಟ್ಟು ನೃತ್ಯಗಾರರೊಂದಿಗೆ ನೃತ್ಯ ಮಾಡಿ ಸಂತಸವಾಯಿತು. ಅವರ ಕಲೆ ಅವರ ಮೌಲ್ಯಗಳನ್ನು ತೋರಿಸುತ್ತದೆ. ನಾವು ಅದನ್ನು ಕಲಿಯಬೇಕು ಮತ್ತು ಸಂರಕ್ಷಿಸಬೇಕು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು. ಈ ನಡುವೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಕಾಶ್ಮೀರದವರೆಗೆ ನಡೆಯಲಿದೆ.
ಈ 3500 ಕಿಮೀ ಪ್ರಯಾಣವು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಐದು ತಿಂಗಳ ಕಾಲ ಈ ಪಾದಯಾತ್ರೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ.ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಗಲ ಮೇಲೆ ಮೇಕೆಯನ್ನು ಹೊತ್ತುಕೊಂಡಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಫೋಟೋವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ‘G.O.A.T’, ಎಂದು ಬರೆದುಕೊಂಡಿದ್ದಾರೆ. ಅಂದರೆ ಎಲ್ಲಾ ಸಮಯದಲ್ಲೂ ಶ್ರೇಷ್ಠ ವ್ಯಕ್ತಿ- ಗ್ರೇಟೆಸ್ಟ್ ಆಫ್ ಆಲ್ ಟೈಂ ಎಂದು ಬರೆದುಕೊಂಡಿದ್ದಾರೆ.