ನವದೆಹಲಿ: ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಗಾಂಧಿ, ನಾನು ಕ್ಷಮೆ ಕೇಳುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, “ಅದಾನಿ ಕುರಿತಾಗಿ ನನ್ನ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ಭಯಗೊಂಡಿದ್ದಾರೆ. ಅದನ್ನು ನಾನು ಅವರ ಕಣ್ಣುಗಳಲ್ಲಿ ಕಂಡಿದ್ದೇನೆ. ಹೀಗಾಗಿಯೇ ಮೊದಲು ಗಮನ ಬೇರೆಡೆಗೆ ತಿರುಗಿಸಿದ್ದು ಹಾಗೂ ನಂತರದ ಅನರ್ಹತೆ ಮಾಡಿರುವುದು. ನನ್ನನ್ನು ಶಾಶ್ವತವಾಗಿ ಅನರ್ಹಗೊಳಿಸಿದರೂ, ನಾನು ನನ್ನ ಕೆಲಸ ಮಾಡುತ್ತಲೇ ಇರುತ್ತೇನೆ. ನಾನು ಸಂಸತ್‌ನ ಒಳಗೆ ಇರುತ್ತೇನೆಯೋ ಅಥವಾ ಇಲ್ಲವೋ ಎನ್ನುವುದು ಮುಖ್ಯವಾಗುವುದಿಲ್ಲ. ನಾನು ದೇಶಕ್ಕಾಗಿ ಹೋರಾಡುತ್ತಿರುತ್ತೇನೆ ಎಂದಿದ್ದಾರೆ.
ನನಗೆ ಸತ್ಯದ ಹೊರತಾಗಿ ಬೇರೆ ಯಾವುದರಲ್ಲಿಯೂ ಆಸಕ್ತಿ ಇಲ್ಲ. ನಾನು ಸತ್ಯ ಮಾತ್ರ ಮಾತನಾಡುತ್ತೇನೆ, ಅದು ನನ್ನ ಕೆಲಸ ಹಾಗೂ ಅನರ್ಹಗೊಳ್ಳಲಿ ಅಥವಾ ಬಂಧಿತನಾಗಲಿ ನಾನು ಅದನ್ನು ಮಾಡುತ್ತಲೇ ಇರುತ್ತೇನೆ. ಈ ದೇಶ ನನಗೆ ಎಲ್ಲವನ್ನೂ ನೀಡಿದೆ. ಹಾಗಾಗಿ ನಾನು ಇದನ್ನು ಮಾಡುತ್ತೇನೆ ಎಂದರು.
ಮೋದಿ-ಅದಾನಿ ನಡುವಿನ ವ್ಯವಹಾರ ಬಹಳ ಹಿಂದಿನಿಂದ ಇದೆ. ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗಿನಿಂದಲೂ ಅವರ ನಡುವಿನ ವ್ಯವಹಾರ ಇದೆ.ನಾನು ಎರಡೂ ಬಾರಿ ಪತ್ರ ಬರೆದರೂ ಯಾವುದೇ ಪ್ರತ್ಯುತ್ತರ ಬಂದಿಲ್ಲ ಎಂದು ಹೇಳಿದ್ದಾರೆ.