ರತ್ಲಾಮ್/ ಮಧ್ಯಪ್ರದೇಶ: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದ ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಅಯೋಧ್ಯೆಯ ರಾಮಮಂದಿರ ದರ್ಶನಕ್ಕೆ ಉಚಿತವಾಗಿ ಕರೆದೊಯ್ಯಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಲ್ಲಿನ ರತ್ಲಾಮ್ ಜಿಲ್ಲೆಯ ಜೌರಾ ಕ್ಷೇತ್ರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, 1980ರಲ್ಲಿ ಪಕ್ಷವು ತನ್ನ ಪ್ರಯಾಣವನ್ನು ಪ್ರಾರಂಭಿಸಿದಾಗ, ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತ ಪಡೆದ ನಂತರ ವಿಶ್ವದ ಯಾವುದೇ ಶಕ್ತಿಯು ರಾಮಮಂದಿರ ನಿರ್ಮಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದೆವು.
ಇದನ್ನೂ ಓದಿ: ಮುಸ್ಲಿಮರ ಗುರಿಯಾಗಿಸಿ ಪರೀಕ್ಷಾ ಆದೇಶ ಬಿಡುಗಡೆ: ರಾಜ್ಯ ಕಾಂಗ್ರೆಸ್ ವಿರುದ್ಧ ಒಮರ್ ಅಬ್ದುಲ್ಲಾ ಕಿಡಿ
ಜನವರಿ 22, 2024 ರಂದು ದೇವಸ್ಥಾನದ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ನಿಮ್ಮನ್ನು ಆಹ್ವಾನಿಸಲು ನಾನು ಬಂದಿದ್ದೇನೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡರೆ, ರಾಮಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ವೃದ್ಧರು ಮತ್ತು ಮಹಿಳೆಯರನ್ನು ಅಯೋಧ್ಯೆಗೆ ಕರೆದೊಯ್ಯಲು ನಿರ್ಧರಿಸಲಾಗಿದೆ ಎಂದರು.
ಒಂದು ಧರ್ಮಕ್ಕೆ ಸೇರಿದ ಸಹೋದರಿಯರ ಗಂಡಂದಿರು ಮೂರು ಬಾರಿ ತಲಾಖ್ ಹೇಳುವ ಮೂಲಕ ತಮ್ಮ ವೈವಾಹಿಕ ಸಂಬಂಧವನ್ನು ಮುರಿದುಕೊಳ್ಳುವುದನ್ನು ನಾವು ನೋಡಿದ್ದೇವೆ. ನಾವು ಮತಗಳ ಬಗ್ಗೆ ಕಾಳಜಿ ವಹಿಸಲಿಲ್ಲ ಮತ್ತು ತ್ರಿವಳಿ ತಲಾಖ್ ಪದ್ಧತಿಯನ್ನು ಕೊನೆಗೊಳಿಸಲು ಕಾನೂನನ್ನು ಜಾರಿಗೊಳಿಸಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿ ಕಡಿದರೆ ಪ್ರತೀ ಹಲ್ಲಿನ ಗುರುತಿಗೆ ₹10,000: ಹೈಕೋರ್ಟ್ ತೀರ್ಪು
ಒಂದು ಕಾಲದಲ್ಲಿ ‘ಗರೀಬಿ ಹಠಾವೋ (ಬಡತನ ನಿರ್ಮೂಲನೆ)’ ಎಂಬ ಘೋಷಣೆಯನ್ನು ನೀಡಿದ ಕಾಂಗ್ರೆಸ್‌ಗೆ 50-55 ವರ್ಷಗಳ ಕಾಲ ಅಡೆತಡೆಯಿಲ್ಲದೆ ದೇಶವನ್ನು ಆಳಿದರೂ ಬಡತನವನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲ. ಅವರಿಗೆ ಬಡವರ ಬಗ್ಗೆ ನೈಜ ಕಾಳಜಿಯೂ ಇಲ್ಲ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.