ಬೆಳಗಾವಿ: ಬೆಳಗಾವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಭೇಟಿ ನೀಡುತ್ತಿದ್ದು, ಖಾನಾಪುರ ಹಾಗೂ ಕಿತ್ತೂರು ಕ್ಷೇತ್ರಗಳಲ್ಲಿ ಮತ ಪ್ರಚಾರ ನಡೆಸಲಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಿಲ್ಲೆಯ ನಂದಗಡದಲ್ಲಿ ವಿಜಯಸಂಕಲ್ಪ ರಥಯಾತ್ರೆ ಹಾಗೂ ಕಿತ್ತೂರು ಕ್ಷೇತ್ರದಲ್ಲಿ ಬೃಹತ್ ರೋಡ್ ಶೋದಲ್ಲಿ ಭಾಗಿಯಾಗಲಿದ್ದಾರೆ.
ಇಂದು ಬೆಳಗ್ಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ರಾಜನಾಥ್ ಸಿಂಗ್ ಹೆಲಿಕಾಪ್ಟರ್ ಮೂಲಕ ನಂದಗಡಕ್ಕೆ ಭೇಟಿ ನೀಡಲಿದ್ದಾರೆ. ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿರುವ ರಾಜನಾಥ ಸಿಂಗ್ ನಂದಗಡದಲ್ಲಿ ವಿಜಯಸಂಕಲ್ಪ ರಥಯಾತ್ರೆಗೆ ಚಾಲನೆ ಕೊಡಲಿದ್ದಾರೆ. ಕಿತ್ತೂರು ಪಟ್ಟಣದ ಚೆನ್ನಮ್ಮ ವೃತ್ತದಿಂದ ಕೋಟೆಯವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದು, ರಾಜನಾಥ ಸಿಂಗ್‌ಗೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ ಸೇರಿ ಸ್ಥಳೀಯ ಶಾಸಕರು ಸಾಥ್ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ , ಅಮಿತ್ ಶಾ ಪದೇ ಪದೇ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದು, ಇದೀಗ ರಾಜನಾಥ್ ಸಿಂಗ್ ಭೇಟಿ ನೀಡುತ್ತಿದ್ದಾರೆ. ಕಮಲ ಪಾಳಯದಲ್ಲಿ ಪ್ರಚಾರ ಜೋರಾಗಿದ್ದು, ಈ ಬಾರಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ವಿಜಯ ಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ಚುನಾವಣಾ ಪ್ರಚಾರ ಕೈಗೊಂಡಿದೆ.