ನವದೆಹಲಿ: ನಿಮ್ಮ ಈ ಹೋರಾಟಕ್ಕೆ ಯಶಸ್ಸು ಸಿಗಲಿದೆ ಎಂದು ನಾನು ಭಾವಿಸುತ್ತೇನೆ. ಹಾಗೆಯೇ ಅದಕ್ಕಾಗಿ ಪ್ರಾರ್ಥಿಸುತ್ತೇನೆ. ದೇವರು ನಿಮಗೆ ಆಯುಷ್ಯ, ದೀರ್ಘಾಯುಷ್ಯ ನೀಡಿ ಕಾಪಾಡಲಿ ಎಂದು ಅಯೋಧ್ಯೆಯ ರಾಮಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ರಾಹುಲ್ ಗಾಂಧಿಗೆ ವಿಶ್ ಮಾಡಿ ಪತ್ರವೊಂದನ್ನು ಬರೆದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಸದ್ಯ ಉತ್ತರಪ್ರದೇಶಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದು, ರಾಮನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿದೆ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ನೀವು ಜನರ ಹಿತಾಸಕ್ತಿ ಮತ್ತು ಅವರ ಸಂತೋಷಕ್ಕಾಗಿ ‘ಸರ್ವಜನ್ ಹಿತೈ ಸರ್ವಜನ್ ಸುಖೇ’ ಎಂಬ ಉದಾತ್ತ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದೀರಿ. ಶ್ರೀರಾಮನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುವುದಾಗಿ ಉಲ್ಲೇಖಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯು ಡಿಸೆಂಬರ್ 24 ರಂದು ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿಸಿತ್ತು. ಚಳಿಗಾಲದ ವಿಶ್ರಾಂತಿ ಪಡೆದುಕೊಂಡು 9 ದಿನಗಳ ಬಳಿಕ ಇಂದು ಪುನರಾರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಉತ್ತರಪ್ರದೇಶ ಪ್ರವೇಶಿಸಲಿದೆ.
ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಹಾಗು ದೆಹಲಿಯನ್ನು ಹಾದು ಉತ್ತರಪ್ರದೇಶಕ್ಕೆ ಬರುತ್ತಿದೆ. ಈ ಯಾತ್ರೆಯು 2023 ರ ಫೆಬ್ರವರಿ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.