ಮಂಗಳೂರು: ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿಗೆ ವಿರೋಧವಿದೆ ಎಂದು ಹೇಳಿಕೆ ನೀಡಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡಬಾರದು ಬದಲಿಗೆ ರದ್ದುಪಡಿಸಿ ತೋರಿಸಲಿ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದರು.
ಕಸ್ತೂರಿ ರಂಗನ್ ವರದಿ ಇನ್ನೂ ರದ್ದಾಗಿಲ್ಲ. ಆ ಸಮಸ್ಯೆ ಇನ್ನೂ ಜೀವಂತ ಇದೆ. ಕಸ್ತೂರಿ ರಂಗನ್ ವರದಿ ಜಾರಿ ಬೇಡ ಎಂದು ಆಕ್ಷೇಪವನ್ನು ಕೇಂದ್ರಕ್ಕೆ ರಾಜ್ಯ ಸರಕಾರ ಕಳುಹಿಸಿದೆ. ಅದನ್ನು ಜಾರಿಗೊಳಿಸುವ ಪ್ರಯತ್ನ ಮಾಡಲಿ ಎಂದು ತಿಳಿಸಿದರು. ರಾಜ್ಯದಲ್ಲಿ ನಮ್ಮ ಸರಕಾರ ಇದ್ದಾಗ ಈ ಬಗ್ಗೆ ವಿವಿಧ ಕಡೆ ಪ್ರತಿಭಟನೆ, ಹೋರಾಟ ನಡೆಸಿದ್ದ ಬಿಜೆಪಿ, ಇಂದು ಡಬ್ಬಲ್ ಎಂಜಿನ್ ಸರಕಾರ ಇರುವಾಗ ಅದನ್ನು ರದ್ದುಪಡಿಸಲು ಕ್ರಮ ವಹಿಸುವುದು ಬಿಟ್ಟು ವಿರೋಧ ಎಂದು ಹೇಳುವುದು ರಾಜಕೀಯ ಪ್ರೇರಿತ ಎಂದರು.
ಬಿಜೆಪಿ ಇಂತಹ ಪ್ರತಿಯೊಂದು ವಿಚಾರದಲ್ಲಿಯೂ ರಾಜಕೀಯ ಮಾಡುವ ಪ್ರಯತ್ನ ಮಾಡುತ್ತದೆ. ಎತ್ತಿನಹೊಳೆ ಯೋಜನೆ ಜಾರಿಗೆ ತಂದಾಗ ಪ್ರತಿಭಟನೆ, ಪಾದಯಾತ್ರೆ ಮಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಇದೀಗ ಹಾಸನ, ಕೋಲಾರದಲ್ಲಿ ಭಾಗದಲ್ಲಿ ಅದನ್ನು ನಾವೇ ಮಾಡಿದ್ದು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಹೇಳಿದರು.