ರಾಮನಗರ : ಅಯೋಧ್ಯೆ ಮಾದರಿಯಲ್ಲಿ ಐತಿಹಾಸಿಕ ರಾಮದೇವರ ಬೆಟ್ಟ ಸಹ ಅಭಿವೃದ್ಧಿಪಡಿಸಿ ಸಚಿವ ಡಾ. ಅಶ್ವತ್ಥನಾರಾಯಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಪತ್ರ ಬರೆದಿದ್ದಾರೆ.
ಐತಿಹಾಸಿಕ ತಾಣವಾಗಿರುವ ರಾಮದೇವರ ಬೆಟ್ಟವು ತ್ರೇತಾಯುಗದಷ್ಟು ಹಿಂದಿನ ಪರಂಪರೆಯನ್ನು ಹೊಂದಿದೆ. ಇದನ್ನು ಆಕರ್ಷಕವಾಗಿ ಅಭಿವೃದ್ಧಿ ಪಡಿಸಿ, ಮುಂದಿನ ತಲೆಮಾರುಗಳಿಗೂ ದಾಟಿಸಬೇಕು ಎನ್ನುವುದು ಸ್ಥಳೀಯ ಜನರ ಕನಸಾಗಿದ್ದು, ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಐತಿಹಾಸಿಕ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆಯ ರಾಮ ಮಂದಿರದಂತೆಯೇ ಒಂದು ದೇವಸ್ಥಾನ ನಿರ್ಮಿಸುವ ಅವಶ್ಯಕತೆಯಿದೆ. ಇದು 19 ಎಕರೆ ವಿಸ್ತಾರವಾದ ಪ್ರದೇಶವನ್ನು ಒಳಗೊಂಡಿದೆ.
ರಾಮದೇವರ ಬೆಟ್ಟವನ್ನು ದಕ್ಷಿಣದ ಅಯೋಧ್ಯೆಯಂತೆ ಬೆಳೆಸಬೇಕೆನ್ನುವುದು ರಾಮನಗರ ಜಿಲ್ಲೆಯ ಸಾರ್ವಜನಿಕರು ಮತ್ತು ಭಕ್ತಾದಿಗಳ ಒತ್ತಾಸೆಯಾಗಿದೆ. ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಈ ಬೆಟ್ಟವನ್ನು ಭಕ್ತರ ಅಪೇಕ್ಷೆಯಂತೆ ಅಭಿವೃದ್ಧಿಪಡಿಸಿದರೆ ಸಂಸ್ಕೃತಿ ರಕ್ಷಣೆ ಮತ್ತು ಪ್ರವಾಸೋದ್ಯಮ ಬೆಳವಣಿಗೆ ಎರಡನ್ನೂ ಸಾಧಿಸಲು ಅವಕಾಶವಿದೆ ಎಂದು ಪ್ರಸ್ತಾಪಿಸಿದ್ದಾರೆ.
ಹಾಗೆಯೇ, ಈ ಬೆಟ್ಟವು ದೇಶದ ಏಕೈಕ ರಣಹದ್ದುಗಳ ಸಂರಕ್ಷಿತ ಪ್ರದೇಶವಾಗಿದೆ. ಈ ಪಕ್ಷಿಗಳಿಗೂ ರಾಮಾಯಣಕ್ಕೂ ಸಂಬಂಧವಿರುವುದು ಕೂಡ ಗಮನಾರ್ಹವಾಗಿದೆ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.