ಬೆಳಗಾವಿ : ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತಂದು ಸರ್ಕಾರ ಮಾಡಲೇಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹತ್ತು ಜನ ಪ್ರಮುಖರಲ್ಲಿ ನಾನು ಕೂಡ ಒಬ್ಬನಾಗುತ್ತೇನೆ ಎಂದರು. ಯಾವ ವ್ಯವಸ್ಥಿತ ಸಂಚು ಮಾಡಿ ದಿನನಿತ್ಯ ಮಾಧ್ಯಮಗಳಲ್ಲಿ ಬರುತ್ತಿದೆ ಗೊತ್ತಿಲ್ಲ. ನಾನು ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲೇ ಮುಂದುವರಿಯುತ್ತೇನೆ. ಬಿಜೆಪಿಯಲ್ಲಿ ಉನ್ನತ ಹುದ್ದೆಗೆ ಹೋಗಿ ಸೇವೆ ಮಾಡುತ್ತೇನೆ. 2023ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ನಾನು ಪ್ರಮುಖ ನಾಯಕನಾಗಿರುತ್ತೇನೆ. ನಾನು ಒಬ್ಬ ಪ್ರಮುಖ ನಾಯಕನಾಗಿ ಕೆಲಸ ಮಾಡುತ್ತೇನೆ.
ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಬಿಜೆಪಿ ಬೆಳೆಸಲು ಪ್ರಯತ್ನಿಸುತ್ತೇನೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎನ್ನುವುದೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ನನ್ನ ಉದ್ದೇಶವಾಗಿದೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಜೆಡಿಎಸ್‌ಗೆ ಸೇರ್ಪಡೆ ಆಗುವುದಿಲ್ಲ , ಹತ್ತು ಮಂದಿ ಬಿಜೆಪಿಯ ಪ್ರಮುಖರಲ್ಲಿ ನಾನೇ ಇರುವಾಗ ಬೇರೆಯವರನ್ನು ಮಂತ್ರಿ ಮಾಡುವ ಹಾಗೂ ಬೇರೆಯವರಿಗೆ ಟಿಕೆಟ್ ಕೊಡುವ ಶಕ್ತಿ ಕೊಟ್ಟಾಗ ನಾನೇಕೆ ಬಿಜೆಪಿ ಏಕೆ ಬಿಡಲಿ ಎಂದು ಪ್ರಶ್ನಿಸಿದರು. ಮಂತ್ರಿ ಸ್ಥಾನಕ್ಕಾಗಿ ನಾನು ಲಾಬಿ ಮಾಡುವ ಮನುಷ್ಯನಲ್ಲ. ಈವರೆಗೂ ಒಬ್ಬರ ಮನೆಗೂ ನಾನು ಮಂತ್ರಿ ಮಾಡುವಂತೆ ಹೋಗಿಲ್ಲ.
ಸರ್ಕಾರ ಮಾಡಿದವರು ನಾವು, ನಾನು ಅಲ್ಲ. ನಾವು, ನಾನು ಹೋಗಿ ಬಯೋಡೇಟಾ ತೆಗೆದುಕೊಂಡು ಮಂತ್ರಿ ಮಾಡಿ ಎಂದು ಕೆಳಮಟ್ಟಕ್ಕೆ ಇಳಿದಿಲ್ಲ. ನನ್ನನ್ನು ಮಂತ್ರಿ ಮಾಡುವುದು, ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು, ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಗೆಲ್ಲಿಸಲು ಪ್ರಯತ್ನ ಮಾಡಲಾಗುವುದು. ಈಗಾಗಲೇ 36ರಿಂದ 40 ಸೀಟ್ ಗುರುತಿಸಿದ್ದೇವೆ ಎಂದರು.