ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರಕ್ಕೆ ಅಧಿಕಾರದಲ್ಲಿರುವ ನೈತಿಕತೆಯಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಭ್ರಷ್ಟಾಚಾರದ ಸಮುದ್ರದಲ್ಲಿ ಮುಳುಗಿ ಹೋಗಿದೆ. ಪ್ರಜಾಪ್ರಭುತ್ವದ ಮೌಲ್ಯ ಗಾಳಿಗೆ ತೂರಿದ ಬಿಜೆಪಿಯದ್ದು ಅನೈತಿಕ ಸರ್ಕಾರ. ಎರಡೂ ಕೈಯಲ್ಲಿ ಲಂಚ ತೆಗೆದುಕೊಳ್ಳುತ್ತ ಬಿಜೆಪಿ ರಾಜ್ಯದಲ್ಲಿ ಲೂಟಿ ಮಾಡುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಕೃಷ್ಣ ನೀರಿನ ಬಳಕೆ ಕುರಿತಾಗಿ ಡಿಸೆಂಬರ್ 30 ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಮಹದಾಯಿ ವಿಚಾರವಾಗಿ ಜನವರಿ 2ಕ್ಕೆ ಹೋರಾಟ ನಡೆಸಲಿದೆ. ಇದಲ್ಲದೇ ಎಸ್ಸಿ, ಎಸ್ಟಿ ಸಮುದಾಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಚಿತ್ರದುರ್ಗದಲ್ಲಿ ಬೃಹತ್ ರಾಲಿ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಮಠಗಳಿಗೆ ನೀಡುವ ಅನುದಾನದಲ್ಲಿಯೂ ಭ್ರಷ್ಟಾಚಾರ ಬಿಟ್ಟಿಲ್ಲ. ಶೇ.05 ಪರ್ಸೆಂಟ್ ಡಿಸ್ಕೌಂಟ್ ನೀಡಿ 35 ಪರ್ಸೆಂಟ್ ಕಮಿಷನ್ ಹೊಡೆದಿದೆ. ಕರ್ನಾಟಕದಲ್ಲಿ 40% ಹೊರತಾಗಿ ಕರ್ನಾಟಕದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ರಾಜ್ಯದಲ್ಲಿ ನೌಕರಿಗಳು ಬಿಕರಿ ಆಗುತ್ತಿವೆ. ಪಿಎಸ್ಐ ಹಗರಣ ನೇರವಾಗಿ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿ ಬಾಗಿಲಿಗೆ ಬಂದಿದೆ ಎಂದು ಆರೋಪಿಸಿದರು.