ಬೆಂಗಳೂರು: ಸ್ಥಿರ, ಅಭಿವೃದ್ಧಿ ಪರ ಸರ್ಕಾರ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ರಾಜಾಜಿನಗರದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿ, ಮೈತ್ರಿ ಸರ್ಕಾರ ಬಂದಾಗ ಏನೇನಾಯ್ತು ಎನ್ನುವುದು ರಾಜ್ಯದ ಜನತೆ ನೋಡಿದ್ದಾರೆ ಎಂದರು.
ದೇಶದಲ್ಲಿ, ರಾಜ್ಯದಲ್ಲಿ ಬಿಜೆಪಿ ಪರಿವರ್ತನೆ ತಂದಿದೆ. ಭಯೋತ್ಪಾದಕರ ಹೆಡೆಮುರಿ ಕಟ್ಟಿದ್ದೇವೆ. ಸದಾ ತೊಂದರೆ ನೀಡುತ್ತಿದ್ದ ಪಾಕಿಸ್ತಾನ ಊಟಕ್ಕೂ ಕಷ್ಟಪಡುವಂತಾಗಿದೆ. ಅಲ್ಲಿನ ಜನರೇ ಮೋದಿಯವರಂತಹ ಪ್ರಧಾನಮಂತ್ರಿ ಬೇಕು ಅನ್ನುತ್ತಿದ್ದಾರೆ ಎಂದು ತಿಳಿಸಿದರು. ಯಡಿಯೂರಪ್ಪ- ಬಸವರಾಜ ಬೊಮ್ಮಾಯಿಯವರ ಸರಕಾರ ಅನೇಕ ಉತ್ತಮ ಯೋಜನೆಗಳನ್ನು ಜನತೆಗೆ ಕೊಟ್ಟಿದೆ. ರಾಜ್ಯ ಮತ್ತು ದೇಶ ಸುರಕ್ಷಿತವಾಗಿರಲು ಬಿಜೆಪಿಗೆ ಮತ ಕೊಡಿ ಎಂದರು.
ರಾಹುಲ್ ಗಾಂಧಿ ಬೆಳಗಾವಿಗೆ ಪ್ರಚಾರಕ್ಕೆ ಬರುತ್ತಾರಂತೆ. ನಾವು ಅವರಿಗೆ ಬೆಂಗಳೂರಿಗೂ ಬನ್ನಿ ಅಂತ ವಿನಂತಿ ಮಾಡುತ್ತೇವೆ. ಯಾಕೆಂದರೆ ಅವರು ಕಾಲಿಟ್ಟಲ್ಲಿ ಕಾಂಗ್ರೆಸ್ ಗೆ ಸೋಲು ಕಟ್ಟಿಟ್ಟ ಬುತ್ತಿ. ರಾಜ್ಯದಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಒಂದೇ ಆಯ್ಕೆ ಅದು ಬಿಜೆಪಿ ಎಂದು ಹೇಳಿದರು.
ಇನ್ನು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿನ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಭಾಗಿಯಾಗಿದ್ದರು. ಬಿಜೆಪಿ ರಥಯಾತ್ರೆಯಲ್ಲಿ ಶಿವರಾಮೇಗೌಡ ಭಾಗಿಯಾಗಿದ್ದು, ಪಕ್ಷಕ್ಕೆ ಸೇರುವ ಬಗ್ಗೆ ಖಚಿತಪಡಿಸಿದ್ದಾರೆ.