ಕಲಬುರಗಿ : ಆರ್‌ಎಸ್‌ಎಸ್ ನಿಂದ ಯಾರಾದರೂ ಉದ್ಧಾರ ಆಗಿದ್ದಾರಾ? ಅದರಿಂದ ಯಾರಿಗೂ ಉದ್ಯೋಗ ಸಿಕ್ಕಿಲ್ಲ, ಸಿಗುವುದಿಲ್ಲ. ಅವರ ತತ್ವದಲ್ಲಿ ಸಮಾನತೆ ಇಲ್ಲ, ಆ ತತ್ವ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಆರ್ ಆರ್ ಎಸ್ ಎಸ್ ಗೆ ದೇಶಭಕ್ತಿಯ ಇತಿಹಾಸ ಇಲ್ಲ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಸಮಾನತೆ ತತ್ವವನ್ನು ಹೊಂದಿಲ್ಲ. ಅದರಿಂದ ಯಾರೂ ಉದ್ಧಾರವಾಗಿಲ್ಲ. ಜೆಎನ್‌ಯು ವಿಶ್ವವಿದ್ಯಾಲಯದ ಬಗ್ಗೆ ಮಾತನಾಡುವವರು ಇತಿಹಾಸ ತೆರೆದು ನೋಡಿಕೊಳ್ಳಲಿ. ತಮ್ಮ ಮಂತ್ರಿಗಳು ಎಲ್ಲಿ ಓದಿದ್ದಾರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್ಲಿ ಓದಿದ್ದಾರೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ‘ಬೆಳ್ಳಂ ಬೆಳಗ್ಗೆಯೇ ವರದಿ ಓದಿ ಸಂಕಟವಾಯಿತು, ಕಣ್ಣಾಲಿಗಳು ತುಂಬಿ ಬಂದವು’
ಕಲಬುರಗಿಯ ಕೇಂದ್ರ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಹೆಚ್ಚಾಗಿದೆ. ಈ ಹಿಂದೆ ವಿಶ್ವವಿದ್ಯಾಲಯದಲ್ಲಿ ಆರ್ ಎಸ್ ಎಸ್ ಅವರು ಖಾಕಿ ಚಡ್ಡಿ ಹಾಕಿ ಪರೇಡ್ ಮಾಡಿದ್ದಾರೆ ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಕೆಂಡಾಮಂಡಲರಾದರು.
ಜಿಲ್ಲೆಯ ಸಂಸದರು ರಾಜ್ಯದ ಚಿಂತೆಯನ್ನು ಬಿಟ್ಟು, ತಮ್ಮ ಕ್ಷೇತ್ರವನ್ನು ನೋಡಿಕೊಳ್ಳಲಿ. ನಮ್ಮ ಪಕ್ಷದಲ್ಲಿ ಯಾರು ಲೋಕಸಭಾ ಅಭ್ಯರ್ಥಿ ಆಗುತ್ತಾರೆ ಎಂದು ಅವರಿಗ್ಯಾಕೆ ಚಿಂತೆ? ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಜನ ಇದ್ದಾರೆ. ನಿಮ್ಮಲ್ಲಿ ಯಾರು ಎಂಬುದನ್ನು ತಿಳಿಸಿ ಎಂದು ಬಿಜೆಪಿ ನಾಯಕರ ಕಾಲೆಳೆದರು.
ಬಿಜೆಪಿ ಜೆಡಿಎಸ್ ಪಕ್ಷದ ‘ಬಿ’ ಟೀಮ್ ಆಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದು ಸುಮಾರು 100 ದಿನಗಳನ್ನು ಪೊರೈಸಿದೆ. ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲು ಆಗಿಲ್ಲ. ಅಧಿವೇಶನದಲ್ಲಿ ಜೆಡಿಎಸ್‌ನವರೆ ಹೆಚ್ಚಾಗಿ ವಿರೋಧ ಮಾಡಿದ್ದಾರೆ ಎಂದು ಸಚಿವ ಖರ್ಗೆ ಕಿಡಿ ಕಾರಿದರು.
ಬಿಜೆಪಿ ಜೆಡಿಎಸ್ ಮೈತ್ರಿ ಗ್ಯಾರಂಟಿ ನೀಡಿದ ಖರ್ಗೆ..
ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಅವರು ಮೈತ್ರಿ ಮಾಡಲು ಹೊರಟಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ, ಮೈತ್ರಿ ವಿಚಾರದಲ್ಲಿ ಮುಂಜಾನೆ ಒಂದು ಹೇಳುತ್ತಾರೆ. ಸಾಯಂಕಾಲ ಒಂದು ಹೇಳುತ್ತಿದ್ದಾರೆ, ಇದು ನನ್ನ ಗ್ಯಾರಂಟಿ ಎಂದು ವ್ಯಂಗ್ಯವಾಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.