ಕೊಚ್ಚಿ : ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿ (ಸಿಎಂಡಿಆರ್‌ಎಫ್) ಅಡಿಯಲ್ಲಿ ಹಣ ಬಿಡುಗಡೆ ಮಾಡುವಾಗ ಸ್ವಜನಪಕ್ಷಪಾತ ಮಾಡಿದ್ದಾರೆ ಮತ್ತು ಅವ್ಯವಹಾರವೆಸಗಿದ್ದಾರೆ ಎಂದು ಆರೋಪಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಇತರ 18 ಮಂದಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಲೋಕಾಯುಕ್ತ ನ್ಯಾಯಾಲಯದ ತ್ರಿಸದಸ್ಯ ಪೀಠ ಸೋಮವಾರ ವಜಾಗೊಳಿಸಿದೆ.
ಪ್ರಕರಣದಲ್ಲಿ ಸಿಎಂ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಲೋಕಾಯುಕ್ತ ನ್ಯಾಯಾಲಯ ಪ್ರಕರಣದ ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದ ಒಂದು ವರ್ಷದ ನಂತರ ತೀರ್ಪು ಪ್ರಕಟಗೊಂಡಿದೆ. ಸಾಂವಿಧಾನಿಕ ಪೀಠದ ಇಬ್ಬರು ನ್ಯಾಯಮೂರ್ತಿಗಳು ಭಿನ್ನ ತೀರ್ಪು ನೀಡಿದ್ದ ಹಿನ್ನೆಲೆ, ಕಳೆದ ಮಾರ್ಚ್‌ನಲ್ಲಿ ಪ್ರಕರಣವನ್ನು ಲೋಕಾಯುಕ್ತದ ಪೂರ್ಣ ಪೀಠಕ್ಕೆ ವರ್ಗಾಯಿಸಲಾಗಿತ್ತು.
ಇದನ್ನೂ ಓದಿ : ಇಮ್ರಾನ್ ಖಾನ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ ಪಾಕ್ ನ್ಯಾಯಾಲಯ
ಲೋಕಾಯುಕ್ತ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್, ಉಪ ಲೋಕಾಯುಕ್ತ ನ್ಯಾಯಮೂರ್ತಿ ಹಾರುನ್ ಅಲ್ ರಶೀದ್ ಮತ್ತು ನ್ಯಾಯಮೂರ್ತಿ ಬಾಬು ಮ್ಯಾಥ್ಯೂ ಪಿ ಜೋಸೆಫ್ ಅವರಿದ್ದ ಪೀಠ ಸೋಮವಾರ ತೀರ್ಪು ನೀಡಿದ್ದು, ಸಿಎಂಡಿಆರ್‌ಎಫ್‌ನಿಂದ ಹಣ ಬಿಡುಗಡೆ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಇದೆ ಎಂದಿದೆ.
ಪಿಣರಾಯಿ ವಿಜಯನ್ ಮತ್ತು ಈ ಹಿಂದಿನ ಎಲ್‌ಡಿಎಫ್ ಸಂಪುಟದ ಸದಸ್ಯರು ಸೇರಿದಂತೆ 18 ಮಂದಿಯ ವಿರುದ್ಧ ಕೇರಳ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಆರ್‌ಎಸ್ ಶಶಿಕುಮಾರ್ ಅವರು ಲೋಕಾಯುಕ್ತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.