ಶಿವಮೊಗ್ಗ : ಜಿಲ್ಲೆಯ ಕೀರ್ತಿ ಕಳಶ ಎಂಬಂತಿದ್ದ ಭದ್ರಾವತಿಯ ಉಕ್ಕಿನ ಕಾರ್ಖಾನೆಯು ಪುನಃ ಕಾರ್ಯಾರಂಭವಾಗಿರುವುದು ಜನರಲ್ಲಿ ಸಂತಸ ಮೂಡಿಸಿದೆ. ಮರು ಜೀವ ಪಡೆದಿರುವ ವಿಐಎಸ್‌ಎಲ್ (ವಿಶ್ವೇಶ್ವರಯ್ಯ ಉಕ್ಕು ಮತ್ತು ಸ್ಟೀಲ್ ಲಿಮಿಟೆಡ್) ನ ಸಾವಿರಾರು ದುಡಿಯುವ ಕೈಗಳ ಮೊಗದಲ್ಲಿ ನಗುವಿನ ಮಂದಹಾಸ ಮೂಡುವಂತೆ ಮಾಡಿದ್ದು, ಈ ಮೂಲಕ ಮರೆಯಾಗಿದ್ದ ಕಾರ್ಖಾನೆಯ ಗತ ವೈಭವ ಮರುಕಳಿಸಲಿದೆ.
ನಷ್ಟದ ಕಾರಣದಿಂದ ಬಂದ್ ಮಾಡಲಾಗಿದ್ದ ಈ ಉಕ್ಕಿನ ಕಾರ್ಖಾನೆಯನ್ನು ಮುಚ್ಚಿರುವ ನಿರ್ಧಾರದ ಬಗ್ಗೆ ಕೇಂದ್ರ ಸರ್ಕಾರವು ಪುನರ್ ಪರಿಶೀಲನೆ ಮಾಡಬೇಕೆಂದು ಇತ್ತಿಚಿಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಉಕ್ಕು ಖಾತೆಯ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದರು. ಅದಕ್ಕೆ ಉತ್ತರವಾಗಿ ಕೇಂದ್ರ ಸರ್ಕಾರವು ನಿರ್ಧಾರವನ್ನು ಬದಲಿಸಿ ಕಾರ್ಖಾನೆಯ ಪ್ರಾರಂಭಕ್ಕೆ ಅನುಮತಿಯನ್ನು ನೀಡಿದ್ದು, ಆಗಸ್ಟ್ 10ರಿಂದ ಕಾರ್ಖಾನೆಯು ಪುನರಾರಂಭವಾಗಿದೆ.


ಇದರ ಬಗ್ಗೆ ಟ್ಟಿಟ್ಟರ್ (X)ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದ ರಾಘವೇಂದ್ರ, ವಿಐಎಸ್ಎಲ್ ಮತ್ತೆ ಕೆಲಸ ಶುರು ಮಾಡಿರುವುದು ಎಲ್ಲ ಕಾರ್ಮಿಕರ ನಿರಂತರ ಪ್ರಾರ್ಥನೆ ಹಾಗೂ ಪ್ರಯತ್ನಕ್ಕೆ ಸಂದ ಫಲ ಎಂದು ಹೇಳಿದ್ದಾರೆ. ಆ ಪ್ರಯತ್ನದಲ್ಲಿ ಭಾಗಿಯಾಗಿರುವ ಸಂತೋಷ ನನ್ನದಾಗಿದೆ ಎಂದು ಸಾರ್ಥಕ ಭಾವ ಮೆರೆದಿದ್ದಾರೆ. ಸದ್ಯದಲ್ಲೇ ಈ ಹೆಮ್ಮೆಯ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಮತ್ತೆ ಹಿಂದಿನ ವೈಭವಕ್ಕೆ ಮರಳುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ನಿರಂತರ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ಕೆಲ ದಿನಗಳ ಹಿಂದಷ್ಟೇ ಈ ಕುರಿತು ಮೊದಲ ಸುಳಿವು ನೀಡಿದ್ದ ಸಂಸದ ಬಿ. ವೈ ರಾಘವೇಂದ್ರ,ಕಾರ್ಖಾನೆಯ ಪುನರಾರಂಭದ ಸವಾಲುಗಳನ್ನೆಲ್ಲಾ ಎದುರಿಸಿ ಗೆದ್ದ ಹೆಮ್ಮೆ ಶಿವಮೊಗ್ಗ ಜಿಲ್ಲೆ ಹಾಗೂ ಭದ್ರಾವತಿ ನಗರದ ಜನರದ್ದು, ಭರವಸೆ ಕಳೆದುಕೊಳ್ಳದ ನೌಕರ ಸಮುದಾಯದ್ದು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದರು.
ಕಾರ್ಖಾನೆಯ ಹಿನ್ನೆಲೆ ಏನು..?
1923ರಲ್ಲಿ ಭದ್ರಾವತಿಯಲ್ಲಿ ಆರಂಭವಾಗಿದ್ದ ಈ ಕಾರ್ಖಾನೆಯು ಕಾಗದ,ಸಿಮೆಂಟ್ ಹಾಗೂ ಉತ್ತಮವಾದ ಉಕ್ಕನ್ನು ಉತ್ಪಾದಿಸಲು ಭದ್ರಾವತಿಯು ಖ್ಯಾತಿಯಾಗಿತ್ತು. ನೂತನೀಕರಣದ ಹೆಸರಿನಲ್ಲಿ ಕಾರ್ಖಾನೆಯನ್ನು 1989ರಲ್ಲಿ ಭಾರತ ಸರ್ಕಾರಕ್ಕೆ ಹಸ್ತಾಂತರಿಸಲಾಗಿತ್ತು. ಆಗಿನ ಮೈಸೂರು ಸಾಮ್ರಾಜ್ಯದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್‌ರವರ ಚಿಂತನೆಯ ಫಲವಾಗಿ ಜನ್ಮತಾಳಿದ್ದ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ ಇದಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.