ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಹತ್ತಿಕ್ಕಲು ಕೇಂದ್ರ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆ ನಿವೃತ್ತ ಸೇನಾ ಅಧಿಕಾರಿಯೊಬ್ಬರನ್ನು 5 ವರ್ಷಗಳ ಕಾಲ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ನೇಮಿಸಿ ಆದೇಶ ಹೊರಡಿಲಾಗಿದೆ.
ನೆಕ್ಟರ್ ಸಂಜೆನ್ಬಮ್ ಅವರನ್ನು ಹೊಸದಾಗಿ ನೇಮಿಸಲಾಗಿದ್ದು, ಇವರು 2015ರಲ್ಲಿ ಮ್ಯಾನ್ಮಾರ್‌ನಲ್ಲಿ ಭಾರತ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್‌ನ ಮುಂದಾಳತ್ವ ವಹಿಸಿದ್ದರು. ಸೇನೆಯ ಅಧಿಕಾರಿಯು 21 ಪ್ಯಾರಾಮಿಲಿಟರಿ ಪಡೆ (ವಿಶೇಷ ಪಡೆಗಳು)ಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಇವರಿಗೆ ಸೇನೆಯ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರ ಮತ್ತು 3ನೇ ಅತ್ಯುನ್ನತ ಪ್ರಶಸ್ತಿಯಾದ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ: ಸನಾತನ ಧರ್ಮ ಕುರಿತ ವಿವಾದಾತ್ಮಕ ಹೇಳಿಕೆ; ಉದಯ್‌ನಿಧಿ ವಿರುದ್ಧ ದೂರು
ಈಗ ಮಣಿಪುರದ ಜಂಟಿ ಕಾರ್ಯದರ್ಶಿ (ಗೃಹ) ಆಗಸ್ಟ್ 28 ರಂದು ಹೊರಡಿಸಿದ ಆದೇಶದಲ್ಲಿ ಜೂನ್ 12ರ ಕ್ಯಾಬಿನೆಟ್ ನಿರ್ಧಾರದ ನಂತರ ನೇಮಕಾತಿ ಮಾಡಲಾಗಿದೆ ಎಂದು ಹೇಳಲಾಗಿದೆ. ಸದ್ಯ ಮಣಿಪುರದಲ್ಲಿ ಹಿಂಸಾಚಾರದಿಂದ ಸುಮಾರು 170 ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಪ್ಯಾರಾ ಮಿಲಿಟರಿ ಪಡೆಗಳು ಸೇರಿ ಅಸ್ಸಾಂ ರೈಫಲ್ಸ್ ಪಡೆ ಸಹ ಕಾರ್ಯಾಚರಣೆ ನಡೆಸುತ್ತಿವೆ. ಈ ನಡುವೆ ಪೊಲೀಸ್ ಪಡೆಗೆ ಮತ್ತಷ್ಟು ಬಲ ತರುವ ನಿಟ್ಟಿನಲ್ಲಿ ನಿವೃತ್ತ ಸೇನಾ ನಾಯಕ ನೆಕ್ಟರ್ ಸಂಜೆನ್ಬಮ್ ಅವರ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮ್ಯಾನ್ಮಾರ್‌ನಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇಕೆ..?
ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ವೆಸ್ಟರ್ನ್ ಸೌತ್ ಈಸ್ಟ್ ಏಷ್ಯಾ (UNLFW) ಪ್ರತ್ಯೇಕತಾವಾದಿಗಳು 4 ಜೂನ್ 2015 ರಂದು ಚಾಂಡೆಲ್ ಜಿಲ್ಲೆಯಲ್ಲಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ18 ಭಾರತೀಯ ಸೇನೆ ಸಿಬ್ಬಂದಿ ಹುತಾತ್ಮರಾಗಿದ್ದರು. ಆದರೆ ಈ ಪಡೆ ಮ್ಯಾನ್ಮಾರ್‌ನಲ್ಲಿ ಅಡಗಿ ಕುಳಿತಿರುವ ಬಗ್ಗೆ ಸೇನೆಗೆ ಖಚಿತ ಮಾಹಿತಿ ಲಭ್ಯವಾಗಿತ್ತು.ಇವರು ನಾಗಾಲ್ಯಾಂಡ್ ಪ್ರತ್ಯೇಕತೆಯ ಗುಂಪಿನ ಹೆಸರಲ್ಲಿ ಸೇನೆ ಮೇಲೆ ಆಗಾಗ ದಾಳಿ ಮಾಡುತ್ತಿದ್ದರು.
ಹೀಗಾಗಿ ಮ್ಯಾನ್ಮಾರ್ ಗಡಿಯಲ್ಲಿ ಅಡಗಿದ್ದವರ ಮೇಲೆ ಭಾರತವು ‘ಆಪರೇಷನ್ ಹಾಟ್ ಪರ್ಸ್ಯೂಟ್’ ಘೋಷಿಸಿತ್ತು. ಈ ಸರ್ಜಿಕಲ್ ಸ್ಟ್ರೈಕ್ ಮುಂದಾಳತ್ವ ವಹಿಸಿದ್ದು ಇದೇ ನೆಕ್ಟರ್ ಸಂಜೆನ್ಬಮ್ ಆಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.