ಬೆಂಗಳೂರು : ಸಿದ್ದರಾಮಯ್ಯನವರೇ, ನೀವು ಅಡುಗೆ ಮಾಡುವ ಮುನ್ನವೇ ನಿಮ್ಮ ಅಡುಗೆ ಮನೆ ಖಾಲಿ ಆಗಿತ್ತು ಎಂದು ಕಂದಾಯ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಖಾಲಿಯಾಗಿರುವ ಅಡುಗೆ ಮನೆಯ ಡಬ್ಬ ಅಲ್ಲಾಡಿಸಿ, ಪಕ್ಕದ ಮನೆಯಿಂದ ಹೊರಬರುವ ಅಡುಗೆ ಪರಿಮಳ ನಮ್ಮ ಮನೆಯದ್ದೇ ಎಂದು ಹೇಳಿಕೊಂಡು ಓಡಾಡುತ್ತಾರೆ. ನಿಮ್ಮದು ಬರೀ ಯೋಚನೆ. ನಮ್ಮ ಸರ್ಕಾರದ್ದು ಯೋಜನೆ ಮತ್ತು ಜನಪರ ಕಾರ್ಯಾಚರಣೆ ಎಂದು ಟಾಂಗ್ ಕೊಟ್ಟರು. ಈಗ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಂದಾಯ ಸಚಿವನಾಗಿ ನಾನು ಮುಂದೆ ನಿಂತು ಸಮೀಕ್ಷೆ ನಡೆಸಿ, ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ ಎಂದರು.
ಇಂದು ಕಲ್ಯಾಣ ಕರ್ನಾಟಕ ಜಿಲ್ಲೆಯ ಎಲ್ಲಾ ತಾಂಡಾಗಳನ್ನು ಗ್ರಾಮ ಎಂದು ಘೋಷಣೆ ಮಾಡಿ ಹಕ್ಕುಪತ್ರ ನೀಡಿದ್ದೇವೆ. ಮುಂದೆಯೂ ನಮ್ಮ ಜನಪರ, ಅಭಿವೃದ್ಧಿ ಪರ ಮಾನವೀಯ ಕೆಲಸಗಳು ಮುಂದುವರಿಯಲಿದೆ. ಇದೇ ರೀತಿ ಕಾರ್ಯಕ್ರಮವನ್ನು ದಾವಣಗೆರೆಯಲ್ಲೂ ಮಾಡುವ ಮೂಲಕ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಹಕ್ಕು ಪತ್ರ ನೀಡುತ್ತೇವೆ. ಸಿದ್ದರಾಮಯ್ಯನವರೇ ನೀವು ಆಗ ಮತ್ತೆ ಯಾವ ರೀತಿಯಲ್ಲಿ ಹೇಳಿಕೆ ನೀಡಬೇಕು ಎಂದು ಈಗಲೇ ಯೋಚಿಸಿ ಸಿದ್ಧರಾಗಿ. ಯಾಕೆಂದರೆ ನಿಮ್ಮದು ಬರಿ ಯೋಚನೆ, ನಮ್ಮ ಸರ್ಕಾರದ್ದು ಯೋಜನೆ ಮತ್ತು ಜನಪರ ಕಾರ್ಯಾಚರಣೆ ಎಂದು ಟಕ್ಕರ್ ಕೊಟ್ಟರು.
ಎಂದಿನಂತೆ ಸಿದ್ದರಾಮಯ್ಯನವರು ತಾಂಡಾ ಕಂದಾಯ ಗ್ರಾಮ ಮಾಡುವ ಯೋಚನೆ ಮಾಡಿದ್ದು ಕಾಂಗ್ರೆಸ್ , ಈಗ ಬಿಜೆಪಿ ನಾವು ಮಾಡಿದ ಅಡುಗೆಯಲ್ಲಿ ಊಟ ಮಾಡುತ್ತಿದೆ ಎಂದು ಹೇಳಿ ಜನರ ದಾರಿತಪ್ಪಿಸುವ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.