ನವದೆಹಲಿ: ಬಿಹಾರದ ಮಾಜಿ ಸಿಎಂ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗಾಗಿ ʼಚಂಪಾರಣ್ ಮಟನ್ʼ ಎಂಬ ಸ್ಪೆಷಲ್ ಮಾಂಸಾಹಾರ ರೆಸಿಪಿಯನ್ನು ಖುದ್ದು ತಯಾರಿಸಿದ್ದಾರೆ.
ರಾಹುಲ್ ಹಾಗೂ ಲಾಲು ಮುಂಬೈನಲ್ಲಿ ನಿನ್ನೆಯಷ್ಟೇ ಇಂಡಿಯಾ ಮೈತ್ರಿಕೂಟದ ಮೂರನೇ ಸಭೆಗೆ ಹಾಜರಾಗಿದ್ದರು. ಇಂದು ರಾಹುಲ್ ಅವರು ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದೊಂದಿಗೆ ಲಾಲು ಪುತ್ರಿ, ಸಂಸದೆ ಮಿಸಾ ಭಾರ್ತಿ ಅವರ ದೆಹಲಿ ನಿವಾಸದಲ್ಲಿ ಅನೌಪಚಾರಿಕ ಸಭೆ ಸೇರಿದ್ದರು.
ಇದೇ ವೇಳೆ ಲಾಲು ತಮ್ಮ ನೆಚ್ಚಿನ ಖಾದ್ಯವಾದ ಚಂಪಾರಣ್ ಮಟನ್ ಅನ್ನು ರಾಹುಲ್ ಅವರಿಗಾಗಿ ಖುದ್ದು ತಯಾರಿಸಿ, ಸವಿದರು. ಲಾಲುಜೀ ಅವರು ಅಡುಗೆಯಲ್ಲಿ ಚಾಂಪಿಯನ್ ಆಗಿದ್ದಾರೆ. ಹಾಗಾಗಿ ನಾನು ಸಹ ಅವರಿಂದ ಅಡುಗೆ ಕಲಿಯುತ್ತೇನೆ ಎಂದು ರಾಹುಲ್ ಗಾಂಧಿ ಖುಷ್ ಆದರು.
ರೆಸಿಪಿ ಸಿದ್ಧಪಡಿಸುವಾಗ ರಾಹಲ್, ನೀವು ಇದರಲ್ಲಿ ಎಲ್ಲವನ್ನೂ ಬೆರೆಸುತ್ತೀರಿ. ಹಾಗಾದರೆ ಇದಕ್ಕೂ ರಾಜಕೀಯಕ್ಕೂ ಏನು ವ್ಯತ್ಯಾಸ? ಎಂದು ಲಾಲುಗೆ ಕೇಳಿದರು. ಇದಕ್ಕೆ ಖಾದ್ಯಕ್ಕೆ ಬೆರೆಸಿದ್ದ ಪದಾರ್ಥಗಳನ್ನು ಉಲ್ಲೇಖಿಸಿದ ಲಾಲು, ಇಲ್ಲಿ ಬೆರೆಯದೆ ರಾಜಕೀಯವೂ ಅಸಾಧ್ಯ’ ಎಂದು ಉತ್ತರಿಸಿದರು.
ಪ್ರಿಯಾಂಕಾಗೂ ಕೊಡುತ್ತೇನೆ: ಲಾಲು ತಯಾರಿಸಿದ ಮಟನ್ ರೆಸಿಪಿ ಸವಿದ ರಾಹುಲ್, ಇದನ್ನು ಸಹೋದರಿ ಪ್ರಿಯಾಂಕಾ ಗಾಂಧಿಗೂ ಸ್ವಲ್ಪ ತೆಗೆದುಕೊಂಡು ಹೋಗುತ್ತೇನೆ. ಪ್ರಿಯಾಂಕಾ ತನಗಾಗಿ ಇದನ್ನು ತರಲು ಹೇಳಿದ್ದಾಳೆ. ಇಲ್ಲದಿದ್ದರೆ ನಾನು ತೊಂದರೆಗೆ ಸಿಲುಕುತ್ತೇನೆ ಎಂದು ರಾಹುಲ್ ಹಾಸ್ಯಚಟಾಕಿ ಹಾರಿಸಿದರು.
ರಾಜಕೀಯದ ಹಸಿವು ಎಂದಿಗೂ ತಣಿಸಲ್ಲ: ಬಿಜೆಪಿ ದೇಶದಲ್ಲಿ ಏಕೆ ದ್ವೇಷ ಹರಡುತ್ತಿದೆ ಎಂದು ರಾಹುಲ್ ಪ್ರಶ್ನಿಸಿದಾಗ, ʼರಾಜಕೀಯ ಹಸಿವು ಎಂದಿಗೂ ತಣಿಸುವುದಿಲ್ಲʼ ಎಂದು ಲಾಲು ಉತ್ತರಿಸಿದರು.
ಲಾಲು ಪ್ರಸಾದ್ ಯಾದವ್, ಅವರ ಪುತ್ರ ಮತ್ತು ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿ ರಾಜಕೀಯ ಚರ್ಚೆ ನಡೆಸಿದರು. ಈ ವಿಡಿಯೋಗಳನ್ನು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.