ಬೆಂಗಳೂರು: ನಾನು ಮೂವರು ಅಧಿಕಾರಿಗಳಿಗೆ ನನ್ನ ವೈಯಕ್ತಿಕ ಫೋಟೋಗಳನ್ನು ಕಳುಹಿಸಿದ್ದೇನೆ ಎಂದು ಆರೋಪ ಮಾಡುತ್ತಿದ್ದಾರೆ. ಆ ಮೂವರು ಅಧಿಕಾರಿಗಳ ಹೆಸರನ್ನು ರೂಪಾ ಅವರು ಬಹಿರಂಗಪಡಿಸಲಿ ಎಂದು ರೋಹಿಣಿ ಸಿಂಧೂರಿ ಐಪಿಎಸ್ ರೂಪಾರಿಗೆ ಸವಾಲು ಹಾಕಿದ್ದಾರೆ.
ಐಪಿಎಸ್ ಅಧಿಕಾರಿಯಾಗಿರುವ ರೂಪಾರ ಕಾರ್ಯವ್ಯಾಪ್ತಿಗೂ ನಮಗೂ ಸಂಬಂಧವಿಲ್ಲ. ಅವರದ್ದು ಸೇವೆಯ ವ್ಯಾಪ್ತಿಯೇ ಬೇರೆ ಎಂದರು. ನನ್ನ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಟಾರ್ಗೆಟ್ ಮಾಡಿ ಹಾಕುತ್ತಿದ್ದಾರೆ. ನನ್ನ ಅಕೌಂಟ್ ಸೋಷಿಯಲ್ ಮೀಡಿಯಾದಲ್ಲಿ ಇಲ್ಲ ಎಂದು ಹೇಳಿದ್ದಾರೆ.
ವಂದಿತಾ ಶರ್ಮಾ ಜೊತೆಗೆ ಮಾತುಕತೆ ನಡೆಸಿದ ರೋಹಿಣಿ ಸಿಂಧೂರಿ, ರೂಪಾ ಅವರು ಮೊದಲಿನಂದಲೂ ನನ್ನ ಮೇಲೆ ವೈಯಕ್ತಿಕ ಆರೋಪ, ದ್ವೇಷ ಮಾಡುತ್ತಾ ಬಂದಿದ್ದಾರೆ. ನನ್ನ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ. ಜೊತೆಗೆ ಮುಖ್ಯ ಕಾರ್ಯದರ್ಶಿಗಳಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ.
ರೂಪಾ ಅವರು ಕಾನೂನು ವ್ಯಾಪ್ತಿ ಮೀರಿದ್ದಾರೆ, ಪದೇ ಪದೆ ನಮ್ಮ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ,ಸೋಷಿಯಲ್ ಮಿಡಿಯಾದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.
ವಿದ್ಯಾವಂತ ಉನ್ನತ ಅಧಿಕಾರಿಗಳಾದ ರೂಪಾ, ರೋಹಿಣಿ ಸಿಂಧೂರಿ ಕಿತ್ತಾಡುತ್ತಿದ್ದಾರೆ ಇವರಿಗೆ ನೊಟೀಸ್ ನೀಡಲು ಮುಖ್ಯಮಂತ್ರಿ ಬೊಮ್ಮಾಯಿಯವರು ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.