ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನನ್ನು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಗಡಿಪಾರು ಮಾಡಲು ನಿರ್ದೇಶನ ನೀಡಿದ್ದಾರೆ. ಬೆಂಗಳೂರು ಪೊಲೀಸರು ಚುನಾವಣೆ ಮುಗಿಯುವವರೆಗೆ ಗಡಿಪಾರು ಮಾಡಿದ್ದಾರೆ.
ಚುನಾವಣೆಯ ನಂತರ ಪೊಲೀಸ್ ಮೇಲ್ವಿಚಾರಣೆಯೊಂದಿಗೆ ಮಾತ್ರ ಆತ ನಗರಕ್ಕೆ ಪ್ರವೇಶಿಸಬಹುದಾಗಿದೆ. ಬೆಂಗಳೂರಿನ ವಿಜಯನಗರದಲ್ಲಿರುವ ಸಚಿವ ವಿ.ಸೋಮಣ್ಣ ನಿವಾಸಕ್ಕೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ತನ್ನ ಗ್ಯಾಂಗ್ನ 40 ರಿಂದ 50 ಜನ ಹುಡುಗರ ಜೊತೆಗೆ ಭೇಟಿ ನೀಡಿದ್ದ ಎನ್ನುವ ಸುದ್ದಿ ಹಬ್ಬಿತ್ತು.
ಘಟನೆಯ ನಂತರ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಪರಾಧ ಹಿನ್ನೆಲೆಯುಳ್ಳವರನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡಿದ್ದ ಸಮಯದಲ್ಲೇ ವಿಲ್ಸನ್ ಗಾರ್ಡನ್ ನಾಗ ಬಿಜೆಪಿ ಸಚಿವ ವಿ.ಸೋಮಣ್ಣ ಮನೆಗೆ ಭೇಟಿ ನೀಡಿ ಸುದ್ದಿಯಾಗಿದ್ದ. 50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಸಾವಿರಾರು ಜನ ನನ್ನ ಮನೆಯ ಹತ್ತಿರ ಬಂದು ಹೋಗಿದ್ದಾರೆ. ಅದರಲ್ಲಿ ನಾಗ ಯಾರು, ತಿಮ್ಮ ಯಾರು ಅನ್ನೋದು ನನಗೆ ಗೊತ್ತಿಲ್ಲ. ನಾಗ ಎಂಬುವವರನ್ನು ನಾನೂ ನೋಡಿಲ್ಲ ಎಂದು ಸೋಮಣ್ಣ ಸ್ಪಷ್ಟನೆ ಕೊಟ್ಟಿದ್ದರು.
ಅಂದಹಾಗೆ ಮೇನಲ್ಲಿ ನಡೆಯಲಿರುವ ಚುನಾವಣೆಗೆ ಮುನ್ನ ಹಲವು ಜಿಲ್ಲೆಗಳಲ್ಲಿನ ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು ಮತದಾನ ನಡೆಯಲಿದೆ. ಫಲಿತಾಂಶವು ಮೇ 13 ರಂದು ಪ್ರಕಟಗೊಳ್ಳಲಿದೆ.