ಮೈಸೂರು: ರಾಜ್ಯ ರಾಜಕಾರಣದಲ್ಲಿ ರೌಡಿಶೀಟರ್‍ಗಳನ್ನು ಪಕ್ಷಕ್ಕೆ ಸೇರ್ಪಡೆ ಚಾರ ಬಾರೀ ಸದ್ದು ಮಾಡುತ್ತಿದೆ. ಈ ನಡುವೆ ಮೈಸೂರಿನಲ್ಲಿ ರೌಡಿಶೀಟರ್ ಒಬ್ಬ ಜಿಲ್ಲಾ ನ್ಯಾಯಾಲಯದ ಮುಂದೆ ಬಿಜೆಪಿ ಪಕ್ಷದಲ್ಲಿ ಸ್ಥಾನ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾನೆ. ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ಮಂಡ್ಯ ಜಿಲ್ಲೆಯ ನಾಗಮಂಗಲದ ಫೈಟರ್ ರವಿ ಬಿಜೆಪಿ ಸೇರ್ಪಡೆಯ ಬೆನ್ನಲ್ಲೇ ಭಾರಿ ವಿವಾದ ಸೃಷ್ಟಿಯಾಗಿದೆ. ಜೊತೆಗೆ ಚಾಮರಾಜಪೇಟೆಯಲ್ಲಿ ರೌಡಿಶೀಟರ್ ಸೈಲೆಂಟ್ ರವಿ ಅಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಸಂಸದರಾದ ತೇಜಸ್ವಿಸೂರ್ಯ ಹಾಗೂ ಪಿ.ಸಿ.ಮೋಹನ್ ಅವರು ಭಾಗಿಯಾಗಿದ್ದರು. ಅಂದಿನಿಂದ ಆರಂಭವಾದ ರೌಡಿಶೀಟರ್‍ಗಳ ಪಕ್ಷ ಸೇರ್ಪಡೆ ವಿಚಾರ ಈವರೆಗೂ ಮುಕ್ತಾಯಗೊಳ್ಳುತ್ತಿಲ್ಲ. ಇದೀಗ ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ರೌಡಿಶೀಟರ್ ಒಬ್ಬ ತನಗೂ ಬಿಜೆಪಿ ಪಕ್ಷ ಸೇರ್ಪಡೆ ಮಾಡಿಕೊಂಡು ಸ್ಥಾನಮಾನ ನೀಡುವಂತೆ ಆಗ್ರಹಿಸಿ ವಿಲಕ್ಷಣ ಪ್ರತಿಭಟನೆ ಮಾಡಿದ್ದಾನೆ.
ಮೈಸೂರು ಜಿಲ್ಲಾ ನ್ಯಾಯಾಲಯದ ಮುಂದೆ ಗಾಂಧಿ ಪ್ರತಿಮೆ ಬಳಿ ಏಕಾಂಗಿ ಪ್ರತಿಭಟನೆ ಮಾಡುತ್ತಿರುವ ರೌಡಿಶೀಟರ್ ಮಂಜ, ಅಲಿಯಾಸ್ ‘ಪಾನಿಪುರಿ ಮಂಜ’ ನಾನೂ ರೌಡಿ, ನಿಮ್ಮ ಪಕ್ಷದಲ್ಲಿ ನನಗೂ ಸ್ಥಾನ ಕೊಡುವಿರಾ? ಎಂದು ಬಿಜೆಪಿ ವಿರುದ್ಧ ಪ್ರೊಟೆಸ್ಟ್ ಮಾಡಿದ್ದಾನೆ. ಕೂಡಲೇ ಕೆಆರ್.ಠಾಣೆ ಪೊಲೀಸ್ ಅಧಿಕಾರಿಗಳು ರೌಡಿಶೀಟರ್ ಪಾನಿಪುರಿ ಮಂಜನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಈ ರೌಡಿಶೀಟರ್ ಮಂಜು ಮೈಸೂರಿನ ಗಣೇಶ್ ನಗರ ನಿವಾಸಿಯಾಗಿದ್ದಾನೆ. 2013ರಲ್ಲಿ 307ಕೇಸ್ ಸೇರಿ ಹಲವು ಕೇಸ್‌ಗಳಲ್ಲಿ ಜೈಲು ವಾಸ ಅನುಭವಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅವನ ವಿರುದ್ಧ ಉದಯಗಿರಿ ಪೊಲೀಸರು 2013ರಲ್ಲಿ ರೌಡಿ ಶೀಟರ್ ತೆರೆದಿದ್ದರು. ಹೆಚ್ಚಿನ ವಿಚಾರಣೆಗಾಗಿ ಉದಯಗಿರಿ ಪೊಲೀಸರಿಗೆ ರೌಡಿಶೀಟರ್‍ನನ್ನು ಹಸ್ತಾಂತರ ಮಾಡಲಾಗಿದೆ. ಸದ್ಯ, ಈವರೆಗೆ ಯಾವುದಾದರೂ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾನೆಯೇ ಎಂದು ಮಾಹಿತಿ ಕಲೆ ಹಾಕಲಾಗುತ್ತಿದೆ.