ಬೆಂಗಳೂರು: ಬ್ರಾಹ್ಮಣರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಖಂಡನೀಯ ಕೂಡಲೇ ಹೆಚ್.ಡಿ. ಕುಮಾರಸ್ವಾಮಿ ಕ್ಷಮೆ ಕೇಳಬೇಕು ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಆಗ್ರಹಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಜಾತ್ಯಾತೀತ ಜನತಾದಳ ಎಂದು ಹೆಸರಿಟ್ಟುಕೊಂಡು ಜಾತಿ ರಾಜಕಾರಣ ಮಾಡ್ತಿರೋ ಎಚ್ ಡಿಕೆಯವರು ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಿದರು. ಪ್ರಹ್ಲಾದ ಜೋಶಿರವರನ್ನು ಮಹಾರಾಷ್ಟ್ರ ಮೂಲದ ಪೇಶ್ವಾಗಳು ಅಥವಾ ದೇಶಸ್ತ ಬ್ರಾಹ್ಮಣರು ಎಂದು ಸೂಕ್ತ ಮಾಹಿತಿ ಇಲ್ಲದೆ ತಮ್ಮ ಹಳೆಯ ಚಾಳಿಯಂತೆ ಯಥಾ ಪ್ರಕಾರ ನಾಲಿಗೆ ಹರಿಬಿಟ್ಟಿರುವುದು ಕ್ಷುಲ್ಲಕ ರಾಜಕಾರಣದ ಪರಮಾವಧಿ. ಪ್ರಹ್ಲಾದ ಜೋಶಿ ಯಾವುದೇ ಪೇಶ್ವೆಗಳಾಗಲಿ ಅಥವಾ ದೇಶಸ್ತ ಬ್ರಾಹ್ಮಣರಲ್ಲ. ಈ ದೇಶದ ಸ್ವತಂತ್ರಕ್ಕಾಗಿ ಬ್ರಾಹ್ಮಣರ ಕೊಡುಗೆ ಅಪಾರ ಎಂದರು.
ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಚಂದ್ರಶೇಖರ್ ಆಜಾದ್, ಮಂಗಲ್ ಪಾಂಡೆ, ಮದನ್ ಲಾಲ್ ಧಿಂಗ್ರ, ವೀರ ಸಾವರ್ಕರ್ ಸೇರಿದಂತೆ ಇನ್ನೂ ಹಲವು ಬ್ರಾಹ್ಮಣರು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಣೆ ಮಾಡಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಲ್ಹಾದ್ ಜೋಶಿಯವರನ್ನು ಮುಖ್ಯಮಂತ್ರಿ ಮಾಡುವ ಚರ್ಚೆ ಆಗಿದೆ. ಬಾಕಿ 8 ಮಂದಿ ಉಪಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಕುಮಾರಸ್ವಾಮಿ ಈ ಹೇಳಿಕೆ ಸದ್ಯ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.